ವಿದ್ಯಾನಗರಿ, ಆರೋಗ್ಯನಗರಿ ಉಡುಪಿ ಜಿಲ್ಲೆ ಮಾದಕ ದ್ರವ್ಯದಲ್ಲೂ ಮುಂಚೂಣಿ: ಎಸ್ಪಿ ಅಕ್ಷಯ್ ವಿಷಾದ
ಉಡುಪಿ, ಜೂ.26: ದೇಶದ 271 ಡ್ರಗ್ಸ್ ಬಾದಿತ ಪ್ರದೇಶಗಳಲ್ಲಿ ಉಡುಪಿ ಕೂಡ ಒಂದಾಗಿದೆ. ವಿದ್ಯಾನಗರಿ, ಆರೋಗ್ಯ ನಗರಿ, ಸಾಂಸ್ಕೃತಿಕ ನಗರಿ ಎಂದೇ ಖಾತ್ಯವಾಗಿರುವ ಉಡುಪಿ ಈ ಕೆಟ್ಟ ದಂಧೆಯಲ್ಲೂ ಮುಂಚೂಣಿಯಲ್ಲಿರುವುದು ದುರದೃಷ್ಟಕರ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಆಶ್ರಯದಲ್ಲಿ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ಸೋಮವಾರ ಉಡುಪಿ ಪೂರ್ಣ ಪ್ರಜ್ಞಾ ಸಭಾಂಗಣದಲ್ಲಿ ಆಯೋಜಿಸಲಾದ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣಿಕೆ ವಿರುದ್ಧ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತಿದ್ದರು.
ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಕ್ಯಾಂಪಸ್‌ಗಳನ್ನು ಮಾದಕ ದ್ರವ್ಯ ಮುಕ್ತ ವನ್ನಾಗಿಸುವ ಬಗ್ಗೆ ಸಂಕಲ್ಪ ಮಾಡಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಎನರ್ಜಿಯನ್ನು ಸಕಾರಾತ್ಮಕವಾಗಿ ಚಿಂತನೆಗೆ ಒಳಪಡಿಸುವ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು. ಆಗ ಇಂತಹ ಕೆಟ್ಟ ಚಟಗಳಿಂದ ದೂರ ಇರಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾವಂತ ಹಾಗೂ ಉತ್ತಮ ಕುಟುಂಬದಿಂದ ಬಂದ ವಿದ್ಯಾರ್ಥಿಗಳು ಕೂಡ ಗಾಂಜಾ ಸೇವನೆಯಿಂದಾಗಿ ದಾರಿ ತಪ್ಪುತ್ತಿದ್ದಾರೆ. ಇದಕ್ಕೆ ಸಮಾಜ ಕೂಡ ಕಾರಣ ಎಂಬುದರ ಬಗ್ಗೆ ನಾವು ಆಲೋಚನೆ ಮಾಡಬೇಕು. ಮಾದಕ ದ್ರವ್ಯ ಸೇವನೆಯಿಂದ ವ್ಯಕ್ತಿಗೆ ಮಾತ್ರ ನಷ್ಟ ಅಲ್ಲ. ದೇಶದ ಭದ್ರತೆಗೂ ದೊಡ್ಡ ಸವಾಲು ಆಗಿದೆ. ಇದರ ಹಣವನ್ನು ಭಯೋತ್ಪಾದಕ ಕೃತ್ಯಗಳಿಗೆ, ಅಕ್ರಮ ಸಶಸ್ತ್ರಗಳ ಸಾಗಾಟಕ್ಕೆ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಒಮ್ಮೆ ಮಾದಕ ದ್ರವ್ಯ ಸೇವಿಸಿದರೆ ಅದು ದೇಹವನ್ನು ಬಿಟ್ಟು ಹೋಗುವುದಿಲ್ಲ. ರಕ್ತದ ಮಾದರಿಯಲ್ಲಿ ಒಂದು ವರ್ಷಗಳವರೆಗೂ ಇರುತ್ತದೆ. ಮಾದಕ ದ್ರವ್ಯ ಸೇವೆಯಿಂದ ವ್ಯಕ್ತಿಯಲ್ಲಿ ಖಿನ್ನತೆ ಸೇರಿದಂತೆ ವಿವಿಧ ಮಾನಸಿಕ ಖಿನ್ನತೆಗಳು ಕಾಣಿಸಿಕೊಳ್ಳುತ್ತವೆ. ಯಾವುದೇ ವಿಷಯ ಅರ್ಥ ಆಗುವುದಿಲ್ಲ, ಏಕಾಗ್ರತೆ ಇರುವುದಿಲ್ಲ ಮತ್ತು ನೆನಪು ಶಕ್ತಿ ಕೂಡ ಕಡಿಮೆಯಾಗುತ್ತದೆ ಎಂದರು.
ಉಡುಪಿ ಡಿವೈಎಸ್ಪಿ ದಿನಕರ ಪಿ.ಕೆ., ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್., ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ., ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರತಿಮಾ ಬಾಳಿಗ ಉಪಸ್ಥಿತರಿದ್ದರು.
‘ಡ್ರಗ್ಸ್ ಮಾರಾಟದಂತೆ ಡ್ರಗ್ಸ್ ಸೇವನೆ ಕೂಡ ಅಪರಾಧವಾಗಿದೆ. ಗಾಂಜಾ ಸೇವನೆಗೆ ಸಂಬಂಧಿಸಿ ಈವರೆಗೆ ಉಡುಪಿಯಲ್ಲಿ 80 ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. 15 ಪೆಡ್ಲರ್ಸ್ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಮ್ಮೆ ಪ್ರಕರಣ ದಾಖಲಾದರೆ ಜೀವನಪೂರ್ತಿ ಅನುಭವಿಸ ಬೇಕಾಗುತ್ತದೆ. ಶಿಕ್ಷಣಕ್ಕೂ ಬಹಳಷ್ಟು ತೊಂದರೆ ಆಗುತ್ತದೆ. ಮದುವೆಗೆ ಬಾಳ ಸಂಗಾತಿಯೂ ಸಿಗಲ್ಲ, ಹೊರಗಡೆ ಹೋಗಲು ಪಾಸ್ ಪೋರ್ಟ್ ಕೂಡ ಆಗುವುದಿಲ್ಲ’
-ಅಕ್ಷಯ್ ಹಾಕೇ ಮಚ್ಚೀಂದ್ರ, ಎಸ್ಪಿ ಉಡುಪಿ