ಮಂಗಳೂರು: ಮಹಿಳೆಯ ಕೊಲೆ ಪ್ರಕರಣ; ಆರೋಪಿಗೆ ಜೀವಾವಧಿ ಶಿಕ್ಷೆ, ದಂಡ

Update: 2023-06-28 14:32 GMT

ಮಂಗಳೂರು, ಜೂ.28: ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.

ಮಂಜೇಶ್ವರ ಸಮೀಪದ ಪಾತೂರು ವರ್ಕಾಡಿ ಬದಿಮಾಲೆ ನಿವಾಸಿ ಮುಹಮ್ಮದ್ ಅಶ್ರಫ್ ಯಾನೆ ಅಶ್ರಫ್ (33) ಶಿಕ್ಷೆಗೊಳಗಾದ ಆರೋಪಿ.

2020ರ ಸೆ.24ರಂದು ಬಾಳೆಪುಣಿ ಗ್ರಾಮದ ಬೆಳ್ಕೇರಿಯ ಒಂಟಿ ಮಹಿಳೆಯ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಅತ್ಯಾಚಾರವೆಸಗಿ ಕೊಲೆಗೈದ ಆರೋಪವು ಈತನ ಮೇಲಿತ್ತು. ಆರೋಪಿಯು ಕೊಂದ ಬಳಿಕ ಬೆಂಕಿ ಹಚ್ಚಿ ಸಾಕ್ಷ್ಯ ನಾಶ ಮಾಡಿದ್ದ. ಚಿನ್ನ, ಹಣ ದೋಚಿ ಪರಾರಿಯಾಗಿದ್ದ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಐಪಿಸಿ ಕಲಂ 302ರಡಿ ಜೀವಾವಧಿ ಶಿಕ್ಷೆ ಮತ್ತು 1 ಲ.ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ವರ್ಷ ಸಜೆ, ಕಲಂ 448ರಡಿ 1 ವರ್ಷ ಶಿಕ್ಷೆ, 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಸಜೆ, ಕಲಂ 376ರಡಿ 10 ವರ್ಷ ಶಿಕ್ಷೆ, 1 ಲ.ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ವರ್ಷ ಶಿಕ್ಷೆ, ಕಲಂ 392ರಡಿ 10 ವರ್ಷ ಶಿಕ್ಷೆ, 50,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಶಿಕ್ಷೆ, ಕಲಂ 201ರಡಿ 7 ವರ್ಷ ಶಿಕ್ಷೆ, 50,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ವರ್ಷ ಶಿಕ್ಷೆ ವಿಧಿಸಿದ್ದಾರೆ.

ಪ್ರಕರಣದ ವಿಶೇಷ ತನಿಖಾಧಿಕಾರಿಯಾಗಿದ್ದ ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್ ಮತ್ತು ಬಿ. ಶೇಖರ್ ಶೆಟ್ಟಿ ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News