ಕಾಳಾವಾರ ದೇವಸ್ಥಾನ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
ಕುಂದಾಪುರ, ಜೂ.26: ಕಾಳಾವಾರ ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ರಾತ್ರಿ ವೇಳೆ ನಡೆದಿದೆ.
ಮೃತರನ್ನು ಕಾಳಾವರ ನರಿಕೊಡ್ಲು ಮನೆ ನಿವಾಸಿ ಹರೀಶ್ ಪೂಜಾರಿ(37) ಎಂದು ಗುರುತಿಸಲಾಗಿದೆ. ಮಳೆಯಿದ್ದ ಕಾರಣ ಇವರು ತನ್ನ ಮೂವರು ಸ್ನೇಹಿತರೊಂದಿಗೆ ಕಾಳಾವಾರ ದೇವಸ್ಥಾನದ ಸಮೀಪದ ಕೆರೆಗೆ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ಮೀನು ಹಿಡಿಯಲು ಕೆರೆಯಲ್ಲಿ ಈಜುತ್ತಿದ್ದ ಹರೀಶ್ ನೀರಿನಲ್ಲಿ ಮುಳುಗಿ ನಾಪತ್ತೆಯಾದರು.
ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿಶಾಮಕ ದಳದವರು, ಸ್ಥಳೀಯರು ಆಗಮಿಸಿ ಮಧ್ಯರಾತ್ರಿವರೆಗೂ ಹುಡುಕಾಟ ನಡೆಸಿದ್ದರು. ಸೋಮ ವಾರ ಬೆಳಿಗ್ಗೆ ಮತ್ತೆ ಹುಡುಕಾಟ ಆರಂಭಿಸಲಾಯಿತು. ಮುಳುಗು ತಜ್ಞ ಈಶ್ವರ್ ಮಲ್ಪೆ, ಶಬ್ಬೀರ್ ಮಲ್ಪೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಳಾವರ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸುಧೀರ್ ಜಿ., ರಾಜ ಶೇಖರ್, ಪ್ರಕಾಶ್ ಆಚಾರ್ ಹಾಗೂ ಅಗ್ನಿ ಶಾಮಕ ದಳದವರು ಜಂಟಿ ಕಾರ್ಯಾಚರಣೆ ನಡೆಸಿದರು. ಸತತ ಹುಡುಕಾಟದ ಬಳಿಕ ಈಶ್ವರ ಮಲ್ಪೆ ಅವರು ಕೆರೆಯ ಇನ್ನೊಂದು ಬದಿಯ ದಡದ ಸನಿಹ ಮೃತದೇಹ ಪತ್ತೆ ಮಾಡಿ ಮೇಲಕ್ಕೆತ್ತಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.