ಮಂಜೇಶ್ವರ: ಸಮುದ್ರಕ್ಕೆ ಬಿದ್ದ ದಂಪತಿ; ಪತಿ ನಾಪತ್ತೆ
Update: 2025-02-23 11:15 IST
ಕಾಸರಗೋಡು: ಮಂಜೇಶ್ವರ ಹೊಸಬೆಟ್ಟು ಕುಂಡುಕೊಳಕೆಯಲ್ಲಿ ದಂಪತಿ ಸಮುದ್ರಕ್ಕೆ ಬಿದ್ದು ಪತಿ ನಾಪತ್ತೆಯಾಗಿದ್ದು, ಪತ್ನಿಯನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಕಡಂಬಾರ್ ಬಜೆಯ ಭಾಸ್ಕರ (56) ನಾಪತ್ತೆಯಾದವರು. ಹೊಸಂಗಡಿಯಲ್ಲಿ ಟೈಲರಿಂಗ್ ಅಂಗಡಿ ನಡೆಸುತ್ತಿರುವ ಭಾಸ್ಕರ ಹಾಗೂ ಪತ್ನಿ ಮಾಜಿ ಶನಿವಾರ ಸಂಜೆ ಕುಂಡು ಕೊಳಕೆ ತೀರಕ್ಕೆ ತೆರಳಿದ್ದರು.
ಅನುಮಾನಾಸ್ಪದವಾಗಿ ಸ್ಕೂಟರ್ ಕಂಡು ಬಂದ ಹಿನ್ನಲೆಯಲ್ಲಿ ಸ್ಥಳೀಯರು ಗಮನಿಸಿದಾಗ ಮಹಿಳೆಯೋರ್ವರು ತೀರದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಬಳಿಕ ವಿಚಾರಿಸಿದಾಗ ಭಾಸ್ಕರ ನೀರುಪಾಲಾಗಿರುವುದು ತಿಳಿದು ಬಂದಿದೆ.
ಮಂಜೇಶ್ವರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ನಾಪತ್ತೆಯಾದ ಭಾಸ್ಕರ್ ಗಾಗಿ ಶೋಧ ನಡೆಸುತ್ತಿದ್ದಾರೆ