ರಾಜ್ಯ ಸರಕಾರದ ವಿರುದ್ಧ ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ : ʼವಕ್ಫ್ ಕಾಯ್ದೆʼ ಹಿಂಪಡೆಯಲು ಒತ್ತಾಯ

Update: 2024-11-22 11:00 GMT

ಮಡಿಕೇರಿ : ರಾಜ್ಯದಲ್ಲಿ ಗೊಂದಲ ಸೃಷ್ಟಿಸಿರುವ “ವಕ್ಫ್ ಕಾಯ್ದೆ” ಯನ್ನು ಹಿಂಪಡೆಯಬೇಕು ಮತ್ತು ವಿವಿಧ ಹಗರಣಗಳ ಆರೋಪ ಎದುರಿಸುತ್ತಿರುವ ರಾಜ್ಯ ಸರಕಾರವನ್ನು ತಕ್ಷಣ ವಜಾಗೊಳಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.

ನಗರದ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ವಕ್ಫ್ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಜಂಟಿ ಸಮಿತಿಯನ್ನು ರಚಿಸಿದ್ದು, ಅದು ಸೂಚಿಸುವ ಬದಲಾವಣೆಗಳಿಗೆ ರಾಜ್ಯ ಒಪ್ಪಿಗೆಯನ್ನು ನೀಡಬೇಕು. ಮಡಿಕೇರಿಯ ರಾಜರ ಗದ್ದುಗೆ ಆಸ್ತಿಯ ಅತಿಕ್ರಮಣವನ್ನು ತೆರವುಗೊಳಿಸಬೇಕು. ಜಿಲ್ಲೆಯ ಸಿ ಮತ್ತು ಡಿ ಜಮೀನನ್ನು ಅರಣ್ಯವೆಂದು ಘೋಷಣೆ ಮಾಡುವ ಪ್ರಯತ್ನವನ್ನು ಸರಕಾರ ಕೈಬಿಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ಕಳೆದ ಚುನಾವಣೆಯ ಸಂದರ್ಭವೇ ಬಿಜೆಪಿ ಪಕ್ಷವು, ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಬೆಂಬಲಿಸಿದಲ್ಲಿ ಉಂಟಾಗುವ ಸಂಕಷ್ಟಗಳ ಬಗ್ಗೆ ಜನರಿಗೆ ಎಚ್ಚರಿಕೆಯನ್ನು ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಅಲ್ಪಸಂಖ್ಯಾತರನನ್ನು ಓಲೈಸುವ ಯತ್ನವಾಗಿ ವಕ್ಫ್ ಕಾಯ್ದೆಯ ಮೂಲಕ ಬಡವರ್ಗದ ಜನರ ಆಸ್ತಿಯನ್ನು ಕಬಳಿಸುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ತಮ್ಮ ಮೊದಲ ಅವಧಿಯ ತಪ್ಪುಗಳನ್ನು ಸಿದ್ದರಾಮಯ್ಯ ಅವರು ದ್ವಿತೀಯ ಅವಧಿಯಲ್ಲಿ ತಿದ್ದಿ ಕೊಳ್ಳಬಹುದೆನ್ನುವ ಅನಿಸಿಕೆಗಳು ಹುಸಿಯಾಗಿದೆ. ಇದೀಗ ವಕ್ಫ್ ಮೂಲಕ ತಲೆ ತಲಾಂತರಗಳಿಂದ ರೈತರು ಅನುಭವಿಸಿಕೊಂಡು ಬಂದ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸುವ ಮೂಲಕ ಜಾಗ ಕಬಳಿಸುವ ಪ್ರಯತ್ನಕ್ಕೆ ಇಳಿದಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಹೋರಾಟ ರೂಪಿಸಿದ್ದು, ಪ್ರತಿಯೊಬ್ಬರು ಸಂಘಟಿತರಾಗಬೇಕೆಂದು ಕರೆ ನೀಡಿದರು.

ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ವಕ್ಫ್ ಕಾಯ್ದೆ ಸಂವಿಧಾನಕ್ಕೆ ವಿರುದ್ಧವಾದುದು. ಈ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಬೇಕು ಇಲ್ಲವೆ ಕಿತ್ತು ಹಾಕಬೇಕು. ರಾಜ್ಯದ ಕಾಂಗ್ರೆಸ್ ಸರಕಾರ ರೈತರ ಜಮೀನನ್ನು ವಕ್ಫ್ ಮೂಲಕ ಕಸಿದುಕೊಳ್ಳುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರರುಗಳಾದ ಬಿ.ಕೆ.ಅರುಣ್ ಕುಮಾರ್, ತಳೂರು ಕಿಶೋರ್ ಕುಮಾರ್, ಕಾಂಗೀರ ಸತೀಶ್, ನಗರಾಧ್ಯಕ್ಷ ಉಮೇಶ್ ಸುಬ್ರಮಣಿ, ಮಹಿಳಾ ಬಿಜೆಪಿ ಅಧ್ಯಕ್ಷೆ ಅನಿತಾ ಪೂವಯ್ಯ, ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ, ಪ್ರಮುಖರಾದ ಸುವಿನ್ ಗಣಪತಿ, ಮನು ಮುತ್ತಪ್ಪ, ರೀನಾ ಪ್ರಕಾಶ್, ಅರುಣ್ ಶೆಟ್ಟಿ, ಆರ್.ಕೆ.ಚಂದ್ರು, ನಾಗೇಶ್ ಕುಂದಲ್ಪಾಡಿ, ಸತೀಶ್ ಜೋಯಪ್ಪ, ನೆಲ್ಲೀರ ಚಲನ್, ಕೆ.ಎಂ.ಲೋಕೇಶ್, ಬಿ.ಕೆ.ಅರುಣ್ ಕುಮಾರ್, ಬಿ.ಕೆ.ಜಗದೀಶ್, ಕಾಂಗೀರ ಸತೀಶ್, ಮನು ಮಂಜುನಾಥ್, ಡೀನ್ ಬೋಪಣ್ಣ, ಕನ್ನಂಡ ಸಂಪತ್ ಮತ್ತಿತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News