ಪೊನ್ನಂಪೇಟೆಯಲ್ಲಿ ನಡೆದಿದ್ದು ಕಾಡು ಬೆಕ್ಕಿನ ದಾಳಿ!
ಮಡಿಕೇರಿ : ಚಿರತೆಯನ್ನು ಹೋಲುವ ಕಾಡುಬೆಕ್ಕು ಏಕಾಏಕಿ ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ನಿಟ್ಟೂರು ಸಮೀಪದ ತಟ್ಟಕೆರೆ ಪೈಸಾರಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ರಾಜನ್ (48) ಎಂಬುವವರೇ ಕಾಡುಬೆಕ್ಕಿನ ದಾಳಿಗೊಳಗಾದವರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವನ್ಯಜೀವಿ ದಾಳಿ ಮಾಡಿ ಕಿವಿ ಮತ್ತು ತಲೆಯ ಭಾಗಕ್ಕೆ ಘಾಸಿಗೊಳಿಸಿತು. ಅದೃಷ್ಟವಶಾತ್ ಕಿರುಚಾಟ ಕೇಳಿ ಪ್ರಾಣಿ ಅಲ್ಲಿಂದ ಕಾಲ್ಕಿತ್ತಿದೆ. ನಂತರ ಗಾಯಾಳು ರಾಜನ್ ಅವರನ್ನು ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಲಾಯಿತು. ರಾಜನ್ ಅವರು ಗಾಬರಿಯಿಂದ ನನ್ನ ಮೇಲೆ ಹುಲಿ ದಾಳಿಯಾಗಿದೆ ಎಂದು ಹೇಳಿಕೆ ನೀಡಿದ ಪರಿಣಾಮ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು.
ಅಲ್ಲದೆ ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ರಾಜನ್ ಅವರ ಆರೋಗ್ಯ ವಿಚಾರಿಸಿದರು. ದೂರವಾಣಿ ಮೂಲಕ ಸಂಪರ್ಕಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ವನ್ಯಜೀವಿಯ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಶಾಸಕರ ಸೂಚನೆ ಮೇರೆಗೆ ದಾಳಿಯಾದ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಕಾಡುಬೆಕ್ಕಿನ ಮರಿಗಳು ಪತ್ತೆಯಾಗಿವೆ. ಈ ಬಗ್ಗೆ ಗಾಯಾಳು ರಾಜನ್ ಅವರ ಬಳಿ ಖಾತ್ರಿ ಪಡಿಸಿಕೊಳ್ಳುವ ಪ್ರಯತ್ನವನ್ನು ಸಿಬ್ಬಂದಿಗಳು ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಮಾಹಿತಿ ನೀಡಿದ ರಾಜನ್ ಅವರು ವನ್ಯಜೀವಿ ದಾಳಿ ಸಂದರ್ಭ ಗಾಬರಿಯಿಂದ ಹುಲಿ ಎಂದು ಭಾವಿಸಿ ಹುಲಿ ದಾಳಿಯಾಗಿದೆ ಎಂದು ತಿಳಿಸಿರುವೆ, ನಿಖರವಾಗಿ ಯಾವ ಪ್ರಾಣಿ ಎಂದು ತಿಳಿದಿರಲಿಲ್ಲ, ದಾಳಿ ಮಾಡಿದ್ದು ಕಾಡು ಬೆಕ್ಕೇ ಆಗಿರಬಹುದೆಂದು ತಿಳಿಸಿದ್ದಾರೆ.
ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಗಾಯಾಳು ರಾಜನ್ ಅವರೊಂದಿಗೆ ಚರ್ಚಿಸಿದರು.
ನಂತರ ಮಾತನಾಡಿದ ಪೊನ್ನಣ್ಣ ಹಾಗೂ ಸಂಕೇತ್ ಪೂವಯ್ಯ ಅವರು ತಟ್ಟಕೆರೆ ಪೈಸಾರಿಯಲ್ಲಿ ಕಾಡುಬೆಕ್ಕಿನಿಂದ ದಾಳಿಯಾಗಿದ್ದು, ಹುಲಿ ದಾಳಿ ಎಂದು ತಪ್ಪು ಮಾಹಿತಿ ರವಾನೆಯಾಗಿದೆ. ಗ್ರಾಮಸ್ಥರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ಇದು ಹುಲಿ ದಾಳಿಯಲ್ಲ, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.