ವಿಪಕ್ಷಗಳ ಅಪಪ್ರಚಾರಕ್ಕೆ ಜನತೆ ಕಿವಿಗೊಡಬೇಡಿ : ಸಿಎಂ ಸಿದ್ದರಾಮಯ್ಯ

Update: 2024-10-16 16:20 GMT

ಮಂಡ್ಯ : ರಾಜ್ಯ ಸರಕಾರ ದಿವಾಳಿಯಾಗಿದೆ, ಅಭಿವೃದ್ಧಿಗೆ ಹಣ ಇಲ್ಲ ಎಂಬ ವಿಪಕ್ಷಗಳ ಅಪಪ್ರಚಾರಕ್ಕೆ ಜನತೆ ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಬುಧವಾರ ಮಳವಳ್ಳಿ ತಾಲೂಕು ಟಿ.ಕೆ.ಹಳ್ಳಿಯಲ್ಲಿ ಬೆಂಗಳೂರಿನ 110 ಹಳ್ಳಿಗಳಿಗೆ ನೀರು ಒದಗಿಸುವ ಕಾವೇರಿ ಐದನೇ ಹಂತದ ಯೋಜನೆಯ ಲೋಕಾರ್ಪಣೆ ವೇಳೆ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳಿಗಳಿಂದ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದೆ ಸರಕಾರ ದಿವಾಳಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಪಕ್ಷಗಳ ನಾಯಕರು ರಾಜಕೀಯಕ್ಕೋಸ್ಕರ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ರಾಜ್ಯದ ಬಜೆಟ್‍ನ ಗಾತ್ರ 3 ಕೋಟಿ 71 ಲಕ್ಷ ರೂ. ಇದರಲ್ಲಿ ಅಭಿವೃದ್ಧಿ ಕೆಲಸಗಳಿಗೆ 1 ಕೋಟಿ 20 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ. ಐದು ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.

ನಾವು ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಇಂದು ದೇಶದ ಅತಿ ದೊಡ್ಡ ಕುಡಿಯುವ ನೀರಿನ ಕಾವೇರಿ 5ನೇ ಹಂತದ ಯೋಜನೆ ಸಾಕಾರಗೊಂಡಿದೆ. ಇತರ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಹಾಗಾಗಿ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂಬ ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂದು ಅವರು ಅಂಕಿ ಅಂಶಗಳ ಮೂಲಕ ಸ್ಪಷ್ಟನೆ ನೀಡಿದರು.

ಮೇಕೆದಾಟು ಪೂರಕ ಅಣೆಕಟ್ಟೆ ನಿರ್ಮಾಣದಿಂದ ಬೆಂಗಳೂರು ಸೇರಿದಂತೆ ಹಲವು ನಗರ ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗುವ ಜತೆಗೆ, ಹೆಚ್ಚಿನದಾಗಿ ತಮಿಳುನಾಡಿಗೆ ಅನುಕೂಲವಾಗುತ್ತದೆ. ಆದರೆ, ರಾಜಕೀಯ ಕಾರಣಕ್ಕೋಸ್ಕರ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ಕೇಂದ್ರ ಸರಕಾರ ಮನಸ್ಸು ಮಾಡಿದರೆ ಯೋಜನೆ ಅನುಷ್ಠಾನ ಸಾಧ್ಯವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News