ಮಂಡ್ಯ | ಮೈಕ್ರೋ ಫೈನಾನ್ಸ್ ಕಿರುಕುಳ; ಮಹಿಳೆ ಆತ್ಮಹತ್ಯೆ

Update: 2025-01-29 16:52 IST
ಮಂಡ್ಯ | ಮೈಕ್ರೋ ಫೈನಾನ್ಸ್ ಕಿರುಕುಳ; ಮಹಿಳೆ ಆತ್ಮಹತ್ಯೆ

ಪ್ರೇಮಾ(52) 

  • whatsapp icon

ಮಂಡ್ಯ : ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ್ದ ಮಳವಳ್ಳಿ ತಾಲೂಕು ಕೊನ್ನಾಪುರ ಗ್ರಾಮದ ಅಂದಾನಯ್ಯ ಅವರ ಪತ್ನಿ ಪ್ರೇಮಾ(52) ಚಿಕಿತ್ಸೆ ಫಲಕಾರಿಯಾಗದೆ ಮಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಸಾವನ್ನಪ್ಪಿದ್ದಾರೆ.

ಖಾಸಗಿ ಫೈನಾನ್ಸ್ ಸಂಸ್ಥೆಯಿಂದ 6 ಲಕ್ಷ ರೂ. ಸಾಲ ಪಡೆದಿದ್ದ ಪ್ರೇಮಾ ಕೆಲವು ತಿಂಗಳ ಕಂತುಗಳನ್ನು ಪಾವತಿಸಿಲ್ಲವಾದ್ದರಿಂದ ಫೈನಾನ್ಸ್ ಕಂಪನಿ ನ್ಯಾಯಾಲಯಕ್ಕೆ ದೂರು ನೀಡಿದ್ದು, ಮನೆ ಜಪ್ತಿಗೆ ಆದೇಶ ನೀಡಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಫೈನಾನ್ಸ್ ಸಂಸ್ಥೆಯವರು ಪ್ರೇಮಾ ಮನೆಯನ್ನು ಸೀಜ್ ಮಾಡಿದ್ದರು ಎನ್ನಲಾಗಿದೆ.

ಮನೆ ಜಪ್ತಿಯಾದ ಹಿನ್ನೆಲೆಯಲ್ಲಿ ಅಂದಾನಯ್ಯ ಮತ್ತು ಪ್ರೇಮಾ ದಂಪತಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಒಂದು ವಾರದಿಂದ ವಾಸವಿದ್ದರು. ಮನನೊಂದಿದ್ದ ಪ್ರೇಮಾ ಮಂಗಳವಾರ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ಹಲಗೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು.

ಆದರೆ, ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಾ ಸಾವನ್ನಪ್ಪಿದ್ದಾರೆ. ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿ ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಮೈಕ್ರೋ ಫೈನಾನ್ಸ್ ಕಂಪನಿ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಮೃತ ಪ್ರೇಮಾ ಉಜ್ಜೀವನ್ ಬ್ಯಾಂಕ್‌ನಿಂದ 6 ಲಕ್ಷ ರೂ. ಸಾಲ ತೆಗೆದುಕೊಂಡಿದ್ದು, ಮೂರು ತಿಂಗಳ ಕಂತು ಬಾಕಿ ಕಟ್ಟಿರಲಿಲ್ಲವೆನ್ನಲಾಗಿದೆ. ಕೋರ್ಟ್ ಆದೇಶದ ಮೇರೆಗೆ ಉಜ್ಜೀವನ್ ಬ್ಯಾಂಕ್‌ನವರು ಮನೆ ಜಪ್ತಿ ಮಾಡಿದ್ದಾರೆ. ಇದರಿಂದ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವ. ಕೋರ್ಟ್ ಆರ್ಡರ್ ಇರುವುದರಿಂದ ನಾವು ಇತಿ ಮಿತಿಯಲ್ಲಿ ಕೆಲಸ ಮಾಡಬೇಕು. ಜಪ್ತಿ ಮಾಡಿರುವ ಮನೆಯನ್ನು ವಾಪಸ್ಸು ನೀಡಲು ಬ್ಯಾಂಕ್ ಅವರಿಗೆ ಹೇಳಿದ್ದೇನೆ. ಜೊತೆಗೆ ಜಿಲ್ಲಾಡಳಿತದಿಂದ ಪರಿಹಾರದ ಬಗ್ಗೆಯೂ ಚಿಂತಿಸಿದ್ದೇವೆ. ಈಗ ಇವರ ಸಾಲ ಎಷ್ಟಿದೆ ಎಂದು ಬ್ಯಾಂಕ್‌ನವರಿಂದ ಮಾಹಿತಿ ಕೇಳಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಪ್ರತಿಕ್ರಿಯಿಸಿದರು.

“ನಮ್ಮ ತಾಯಿ ಸಾವಿಗೆ ಉಜ್ಜೀವನ್ ಬ್ಯಾಂಕ್ ಅವರೇ ಕಾರಣ. 2018ರಲ್ಲಿ ನಮ್ಮ ತಾಯಿ 6 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು. ಇಲ್ಲಿಯವರೆಗೆ 6 ಲಕ್ಷ ರೂಪಾಯಿ ಹಣವನ್ನು ನಮ್ಮ ತಾಯಿ ಪಾವತಿಸಿದ್ದಾರೆ. ಕಟ್ಟಿರುವ ಹಣವನ್ನು ಬಡ್ಡಿಗೆ ಜಮಾ ಮಾಡಿಕೊಂಡಿದ್ದಾರೆ. ಈಗ ಇನ್ನೂ 6 ಲಕ್ಷ ರೂ. ಕಟ್ಟಿ ಅಂತಾ ಹಿಂಸೆ ಕೊಡುತ್ತಿದ್ದು, ಮನೆ ಸೀಜ್ ಮಾಡಿದ್ದರು. ಇದಕ್ಕೆ ಮನನೊಂದು ನಮ್ಮ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.”

-ಮಾಣಿಕ್ಯ, ಮೃತ ಪ್ರೇಮಾ ಪುತ್ರಿ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News