ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು : ರೈತರ ಆರೋಪ

ಮಂಡ್ಯ: ತಾಂತ್ರಿಕ ತೊಂದರೆ ನೆಪ ಹೇಳಿ ಕೆ.ಆರ್.ಎಸ್. ಜಲಾಶಯದಿಂದ ಕಳೆದ ಮೂರು ದಿನಗಳ ಕಾಲ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಹರಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಆದರೆ ಆರೋಪವನ್ನು ಅಲ್ಲಗಳಿಗಿರುವ ಅಧಿಕಾರಿಗಳು, ಜಲಾಶಯದ +80ನೇ ಗೇಟ್ ನಿಂದ ಮೂರು ದಿನಗಳಿಂದ ಕಾವೇರಿ ನದಿಗೆ ನೀರು ಹರಿದಿದೆ. ಇದೀಗ ತಾಂತ್ರಿಕ ತೊಂದರೆಯನ್ನು ಸರಿಪಡಿಸಿ ಗೇಟ್ ಬಂದ್ ಮಾಡಿರುವುದಾಗಿ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಡ್ಯಾಂ ಕೆಳ ಭಾಗದ ಕಾವೇರಿ ನದಿ ನೀರಿನ ಮಟ್ಟದಲ್ಲಿ ಏಕಾಏಕಿ ಏರಿಕೆಯಾದ ಹಿನ್ನೆಲೆಯಲ್ಲಿ, ನೀರು ಹೆಚ್ಚಳವಾಗಿರುವ ಬಗ್ಗೆ ಪ್ರಶ್ನೆ ಮಾಡಿದವರಿಗೆ ನೀರಾವರಿ ಅಧಿಕಾರಿಗಳಿಂದ ಹಾರಿಕೆಯ ಉತ್ತರ ದೊರೆತಿದೆ ಎನ್ನಲಾಗಿದೆ.
ರೈತರು ಅಧಿಕಾರಿಗಳೊಂದಿಗೆ ಗಲಾಟೆ ಮಾಡಿದ ಬಳಿಕ ಗೇಟ್ ಬಂದ್ ಮಾಡಿಸಿರುವ ನೀರಾವರಿ ಇಲಾಖೆ, ತಾಂತ್ರಿಕ ದೋಷದಿಂದ ಗೇಟ್ ಓಪನ್ ಆಗಿತ್ತೆಂಬ ಸಬೂಬು ಹೇಳುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಸರಕಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ಈ ಕಣ್ಣಾ ಮುಚ್ಚಾಲೆ ಆಟಕ್ಕೆ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.