ಮಂಡ್ಯದ ಜಿ.ಕೆಬ್ಬಹಳ್ಳಿಯಲ್ಲಿ ಪಟಾಕಿ ದುರಂತ : ಓರ್ವ ಸಾವು , ಮತ್ತೋರ್ವ ಗಂಭೀರ

Update: 2024-03-25 12:06 GMT

ಮಂಡ್ಯ : ಪಟಾಕಿ ಸಿಡಿದು ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಜಿ.ಕೆಬ್ಬಹಳ್ಳಿ ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಗ್ರಾಮದ ಕಾಲಭೈರವೇಶ್ವರ ಹಬ್ಬದಲ್ಲಿ ಪಟಾಕಿ ಸಿಡಿಸಲು ತಮಿಳುನಾಡಿನಿಂದ ಬಂದಿದ್ದ ರಮೇಶ್ (45) ಘಟನೆಯಲ್ಲಿ ಸಾವನ್ನಪ್ಪಿದ್ದು, ಸುಟ್ಟಗಾಯಗಳಿಂದ ತೀವ್ರವಾಗಿ ಗಾಯಗೊಂಡಿರುವ ನಾಗಲಿಂಗಯ್ಯ(55) ಅವರನ್ನು ಮಿಮ್ಸ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಅವಘಡದಲ್ಲಿ ಪಟಾಕಿ ಇಡಲಾಗಿದ್ದ ಆಲೆಮನೆ ಸಂಪೂರ್ಣವಾಗಿ ಭಸ್ಮವಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ  ಸಿಬ್ಬಂದಿ ಬೆಂಕಿಯನ್ನು ನಂದಿಸಿ ಅಕ್ಕಪಕ್ಕದ ಮನೆಗಳಿಗೆ ಹರಡುವುದನ್ನು ತಪ್ಪಿಸಿದ್ದಾರೆ.

ಸಂಪ್ರದಾಯದಂತೆ ಅನೇಕ ಗ್ರಾಮಗಳಲ್ಲಿ, ಗ್ರಾಮದೇವತೆ ಹಬ್ಬ ನಡೆಯುವ ಸಂದರ್ಭದಲ್ಲಿ ಪಟಾಕಿಯನ್ನು ಸಿಡಿಸಲಾಗುತ್ತದೆ. ಅಂತೆಯೇ ಜಿ.ಕೆಬ್ಬಹಳ್ಳಿ ಗ್ರಾಮದ ಹಬ್ಬಕ್ಕೂ ಪಟಾಕಿ ಸಿಡಿಸಲು ತಮಿಳುನಾಡಿನಿಂದ ನುರಿತ ಕಾರ್ಮಿಕರನ್ನು ಕರೆಸಲಾಗಿತ್ತು.

ರವಿವಾರ ತಡರಾತ್ರಿಯಿಂದ ಸೋಮವಾರದ ಬೆಳಗಿನ ಜಾವದವರೆಗೆ ಪಟಾಕಿ ಸಿಡಿಸಲಾಗಿದೆ. ನಂತರ, ಉಳಿದ ಪಟಾಕಿಗಳನ್ನು ಶೇಖರಣೆ ಮಾಡಿಕೊಳ್ಳುತ್ತಿದ್ದಾಗ ಪಟಾಕಿ ಸಿಡಿದು ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಮೈಸೂರು ವಿಭಾಗದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ.ಎಸ್.ಜಯರಾಮಯ್ಯ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್, ಮಂಡ್ಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎಂ.ರಾಘವೇಂದ್ರ, ಠಾಣಾಧಿಕಾರಿ ವೆಂಕಟೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂಬಂಧ ಕೆರಗೋಡು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News