ಮಂಡ್ಯ: ಮಗಳ ಆತ್ಮಹತ್ಯೆಯಿಂದ ನೊಂದು ತಾಯಿಯೂ ಆತ್ಮಹತ್ಯೆ

ಮಂಡ್ಯ: ಮಗಳ ಆತ್ಮಹತ್ಯೆಯ ನೋವು ತಾಳಲಾರದೆ ತಾಯಿಯೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಲಕ್ಷ್ಮಿ(50) ಎಂಬವರು ಆತ್ಮಹತ್ಯೆ ಮಾಡಿಕೊಂಡ ವರು. ಪ್ರಿಯಕರ ಕೈಕೊಟ್ಟ ಹಿನ್ನೆಲೆಯಲ್ಲಿ ಈಕೆಯ ಪುತ್ರಿ ವಿಜಯಲಕ್ಷ್ಮಿ(21) ಫೆ.21ರಂದು ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು.
ವಿಜಯಲಕ್ಷ್ಮಿ ತನ್ನ ಗ್ರಾಮದ ಪಕ್ಕದ ಮಾರಸಿಂಗನಹಳ್ಳಿ ನಿವಾಸಿ ಹರಿಕೃಷ್ಣ ಎಂಬುವರನ್ನು ಪ್ರೀತಿಸುತ್ತಿದ್ದು, ಆತ ಮದುವೆಗೆ ನಿರಾಕರಿಸಿದ್ದರಿಂದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ತಿಳಿದು ಬಂದಿದೆ.
ಈ ಸಂಬಂಧ ಆರೋಪಿ ಹರಿಕೃಷ್ಣ ಮತ್ತು ಆತನ ಕುಟುಂಬದ ವಿರುದ್ಧ ವಿಜಯಲಕ್ಷ್ಮಿಯ ಮನೆಯವರು ನೀಡಿದ ದೂರನ್ನು ಸ್ವೀಕರಿಸದೇ, ದೂರು ಕೊಡಲು ಬಂದವರ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.
ತನ್ನ ಮಗಳ ಸಾವಿಗೆ ನ್ಯಾಯ ಸಿಗಲಿಲ್ಲವೆಂಬ ನೋವಿನಿಂದ ತಾಯಿ ಲಕ್ಷ್ಮಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿ ಹರಿಕೃಷ್ಣ ಮತ್ತು ಕುಟುಂಬದವರನ್ನು ಬಂಧಿಸಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಪ್ರಕರಣ ದಾಖಲು:
ಗ್ರಾಮಸ್ಥರ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಹರಿಕೃಷ್ಣ ಸೇರಿ 19 ಜನರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 191, 194, 64, 108, 54, 118ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ ಎಂದು ತಿಳಿದು ಬಂದಿದೆ.