ಮಂಡ್ಯ | KRS ಬಳಿ ಪರೀಕ್ಷಾರ್ಥ ಸ್ಫೋಟಕ್ಕೆ ತೀವ್ರ ವಿರೋಧ‌: ಕಾರ್ಯಾಚರಣೆಯಿಂದ ಹಿಂದೆ ಸರಿದ ಜಾರ್ಖಂಡ್‌ ತಂತ್ರಜ್ಞರ ತಂಡ

Update: 2024-03-05 10:34 GMT

ಮಂಡ್ಯ: ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ಬಳಿ ಬೇಬಿಬೆಟ್ಟದ ಗಣಿಪ್ರದೇಶದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸಲು ಆಗಮಿಸಿರುವ ಜಾರ್ಖಂಡ್‌ನ ತಂತ್ರಜ್ಞರ ತಂಡವು ಪರೀಕ್ಷಾರ್ಥ ಸ್ಫೋಟ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.

ಪರೀಕ್ಷಾರ್ಥ ಸ್ಫೋಟ ವಿರೋಧಿಸಿ ರೈತಸಂಘದ ಕಾರ್ಯತರ್ಕರು, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ನೇತೃತ್ವದಲ್ಲಿ ಜಲಾಶಯದ ಬಳಿ ʼಗೋಬ್ಯಾಕ್ ಚಳವಳಿʼ ನಡೆಸಿದರು.

ಮತ್ತೊಂದೆಡೆ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಮುಖಂಡ ಅಶೋಕ್ ಜಯರಾಂ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರೂ ಪರೀಕ್ಷಾರ್ಥ ಸ್ಫೋಟದ ವಿರುದ್ಧ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತೀವ್ರ ವಿರೋಧದ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತಸಂಘ ಮುಖಂಡರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಮುಖಂಡ ಅಶೋಕ್ ಜಯರಾಂ ಇತರ ಮುಖಂಡರ ಜತೆ ಮಾತುಕತೆ ನಡೆಸಿದ ತಂತ್ರಜ್ಞರ ತಂಡವು, ಪರೀಕ್ಷಾರ್ಥ ಸ್ಫೋಟ ಕಾರ್ಯಾಚರಣೆಯಿಂದ ಹಿಂದೆ ಸರಿಯಿತು.

ಪರೀಕ್ಷಾರ್ಥ ಸ್ಫೋಟ ಕಾರ್ಯಾಚರಣೆ ಹಿಂದೆ ಸರಿದ ಹಿನ್ನೆಲೆಯಲ್ಲಿ ರೈತಸಂಘ ಹಾಗೂ ಬಿಜೆಪಿ ಕಾರ್ಯತರ್ಕರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಮತ್ತೆ ಪರೀಕ್ಷೆಗೆ ಮುಂದಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ತಂತ್ರಜ್ಞರು ಬಂದಿದ್ದರು. ಒಂದೆಡೆ ಜಲಾಶಯಕ್ಕೆ ಅಪಾಯವಿದೆ ಎಂದು ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಕೋರ್ಟ್ ಹೇಳುತ್ತದೆ. ಮತ್ತೊಂದೆಡೆ ಯಾರೋ ಅರ್ಜಿ ಸಲ್ಲಿಸಿದ್ದಾರೆಂದು ಪರೀಕ್ಷಾರ್ಥ ಸ್ಫೋಟಕ್ಕೆ ಆದೇಶ ನೀಡಿರುವುದು ವಿಪರ್ಯಾಸ ಎಂದು ಹೇಳಿದರು.

ರೈತರು ಹಾಗೂ ಸುತ್ತಮುತ್ತಲ ಗ್ರಾಮಗಳ ಜನರ ಒತ್ತಾಯದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಬೇಬಿಬೆಟ್ಟದ ಸುತ್ತಮುತ್ತ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ನಿಷೇದಿಸಿತ್ತು. ಇದನ್ನು ಪ್ರಶ್ನಿಸಿ ಶಿವಕುಮಾರ್ ಎಂಬುವವರು ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು. ಕೆಆರ್‌ಎಸ್ ಜಲಾಶಯದ  ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ ಹೇರಿ, 6 ತಿಂಗಳ ಒಳಗಾಗಿ ಪರೀಕ್ಷಾರ್ಥ ಸ್ಫೋಟ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಇದರ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಪರೀಕ್ಷಾರ್ಥ ಸ್ಫೋಟ ನಡೆಸಲು ಜಾರ್ಖಂಡ್ ನ ತಂತ್ರಜ್ಞರ ತಂಡವನ್ನು ಕರೆಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News