ಮಂಡ್ಯ | ಹನಕೆರೆ ದೇವಾಲಯದಲ್ಲಿ ದಲಿತರು ಪೂಜೆ ಸಲ್ಲಿಸಿದ್ದಕ್ಕೆ ಆಕ್ಷೇಪ : ಉತ್ಸವಮೂರ್ತಿಯನ್ನು ಹೊರತಂದ ಸವರ್ಣೀಯರು
ಮಂಡ್ಯ: ಎರಡೂವರೆ ವರ್ಷದ ಹಿಂದೆ ಜೀರ್ಣೋದ್ಧಾರಗೊಂಡಿದ್ದ ತಾಲೂಕಿನ ಹನಕೆರೆ ಗ್ರಾಮದ ಪ್ರಸಿದ್ದ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯಕ್ಕೆ ರವಿವಾರ ದಲಿತರಿಗೆ ಮುಕ್ತ ಪ್ರವೇಶ ಮತ್ತು ಪೂಜೆಗೆ ಅವಕಾಶ ಮಾಡಿಕೊಡಲಾಯಿತು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಶ್ರೀನಿವಾಸ್, ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದ ದಲಿತರು ಬೆಳಗ್ಗೆ 10 ಗಂಟೆ ಸುಮಾರಿಗೆ ದೇವಾಲಯ ಪ್ರವೇಶಿಸಿ ದೇವರ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು.
ಪುರಾತನ ದೇವಾಲಯದಲ್ಲಿ ಗ್ರಾಮದ ಎಲ್ಲ ಕೋಮಿನ ಜನರು ಪೂಜೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಆದರೆ, ಎರಡೂವರೆ ವರ್ಷಗಳ ಹಿಂದೆ ಗ್ರಾಮದಲ್ಲಿರುವ ಎಲ್ಲ ದೇವಾಲಯಗಳನ್ನು ಅಂದಿನ ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಪುನರುಜ್ಜೀವನಗೊಳಿಸಲಾಗಿತ್ತು.
ಇದಾಗಿ ಕೆಲವು ತಿಂಗಳ ನಂತರ, ಗ್ರಾಮದ ಕೆಲವು ಸವರ್ಣೀಯರು ದಲಿತರ ದೇವಾಲಯ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದ್ದು, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಸಭೆ ನಡೆಸಿ ದಲಿತರು ದೇವಾಲಯ ಪ್ರವೇಶಕ್ಕೆ ಜನರನ್ನು ಒಪ್ಪಿಸಿದ್ದರು ಎನ್ನಲಾಗಿದೆ.
ಸಭೆಯ ತೀರ್ಮಾನಂತೆ ಇಂದು(ರವಿವಾರ) ಅಧಿಕಾರಿಗಳು ಮತ್ತು ದೇವಾಲಯದ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಗ್ರಾಮದ ದಲಿತರು ದೇವಾಲಯ ಪ್ರವೇಶ ಪಡೆದು ದೇವರಿಗೆ ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ, ಮಾಜಿ ಶಾಸಕ ಎಂ.ಶ್ರೀನಿವಾಸ್, ಪದಾಧಿಕಾರಿಗಳು, ತಹಶೀಲ್ದಾರ್ ಶಿವಕುಮಾರ ಬಿರಾದಾರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್, ತಾಲೂಕು ಅಧಿಕಾರಿ ಕಾವ್ಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಸಿಪಿಐ ಶಿವಪ್ರಸಾದ್, ಇತರ ಮುಖಂಡರು ಉಪಸ್ಥಿತರಿದ್ದರು.
ದಲಿತರ ದೇವಾಲಯ ಪ್ರವೇಶಕ್ಕೆ ಆಕ್ಷೇಪ :
ಹನಕೆರೆಯ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯಕ್ಕೆ ದಲಿತರಿಗೆ ಪ್ರವೇಶ ನೀಡಿದ ಕ್ರಮಕ್ಕೆ ಗ್ರಾಮದ ಕೆಲವು ಸವರ್ಣೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಮತ್ತು ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾರೆ.
ಕಾನೂನು ಪ್ರಕಾರ ಎಲ್ಲರಿಗೂ ಮುಕ್ತ ಅವಕಾಶ ನೀಡಬೇಕು. ಎಲ್ಲರೂ ಸೌಹಾರ್ದದಿಂದ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು, ಪೊಲೀಸರು ಆಕ್ಷೇಪಿಸಿದವರಿಗೆ ಎಚ್ಚರಿಸಿದರು ಎಂದು ವರದಿಯಾಗಿದೆ.
ಈ ಸಂದರ್ಭದಲ್ಲಿ ಕೆಲವರು ದೇವಾಲಯದ ಮುಂಭಾಗದ ನಾಮಫಲಕವನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ದೇವಾಲಯದ ಒಳಗಿದ್ದ ದೇವರಮೂರ್ತಿಯ ಉತ್ಸವದ ವಾಹನವನ್ನು(ಉತ್ಸವಮೂರ್ತಿ) ತೆಗೆದುಕೊಂಡು ಬೇರೊಂದು ದೇವಾಲಯದಲ್ಲಿ ಇಟ್ಟುಕೊಂಡಿದ್ದಾರೆಂದು ತಿಳಿದು ಬಂದಿದೆ.
ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದೇ ಇದ್ದರೂ ಸೂಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.
“ನಮ್ಮ ಗ್ರಾಮದಲ್ಲಿ ಮೊದಲಿನಿಂದಲೂ ಎಲ್ಲ ಕೋಮಿನ ಜನರು ಸೌಹಾರ್ದದಿಂದ ಇದ್ದೇವೆ. ದೇವಾಲಯಗಳಿಗೂ ಮುಕ್ತ ಅವಕಾಶ ಇತ್ತು. ದೇವಾಲಯ ಜೀರ್ಣೋದ್ಧಾರದ ವಿಶೇಷ ಪೂಜೆಯಲ್ಲೂ ಮುಕ್ತ ಅವಕಾಶ ಇತ್ತು. ಆದರೆ, ಕೆಲವರು ಇತ್ತೀಚೆಗೆ ದಲಿತರ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನು ದೇವಾಲಯದ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತದ ಗಮನಕ್ಕೆ ತರಲಾಯಿತು. ಆಡಳಿತ ಮಂಡಳಿ ಗ್ರಾಮಸ್ಥರ ಜತೆ ಚರ್ಚಿಸಿ ದೇವಾಲಯ ಪ್ರವೇಶಕ್ಕೆ ಇಂದು ದಿನಾಂಕ ನಿಗದಿ ಮಾಡಿದ್ದರು. ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ನೇತೃತ್ವದಲ್ಲಿ ದಲಿತರು ಪೂಜೆ ಸಲ್ಲಿಸಿದ್ದೇವೆ. ಆದರೆ, ಪೂಜೆ ಸಲ್ಲಿಸಿದ ನಂತರ ಕೆಲವರು ವಿರೋಧ ವ್ಯಕ್ತಪಡಿಸಿ ದೇವಾಲಯದ ನಾಮಫಲಕ ಹಾನಿಗೊಳಿಸಿ, ದೇವರಮೂರ್ತಿ ಮೆರವಣಿಗೆಯ ವಾಹನವನ್ನು ತೆಗೆದುಕೊಂಡು ಹೋದರು. ಅಧಿಕಾರಿ, ದೇವಾಲಯದ ಆಡಳಿತ ಮಂಡಳಿ ಜತೆ ಚರ್ಚಿಸಿದರೆ ಹೊರತು, ಜನರ ನಡುವೆ ಯಾವುದೇ ಸಂಘರ್ಷವಾಗಲಿಲ್ಲ. 21ನೇ ಶತಮಾನದ ನಾಗರಿಕ ಸಮಾಜದಲ್ಲೂ ದೇವಾಲಯ ಪ್ರವೇಶದಲ್ಲಿ ತಾರತಮ್ಯ ತೋರುವುದು ವಿಷಾದಕರ. ದಲಿತರು ದೇವಾಲಯ ಪ್ರವೇಶ ಮಾಡಿದರೆ ಏನು ನಷ್ಟವಾಗುತ್ತದೆ? ಎಲ್ಲರೂ ಸೌಹಾರ್ದದಿಂದ ಹೋಗಬೇಕು.”
-ಎಚ್.ಜಿ.ಗಂಗರಾಜು, ಡಾ.ಬಿ.ಆರ್.ಅಂಬೇಡ್ಕರ್ ವಾರಿರ‍್ಸ್ ಸಂಘಟನೆಯ ರಾಜ್ಯಾಧ್ಯಕ್ಷ.