ಸಿ.ಟಿ.ರವಿಯಿಂದ ನನ್ನ ತೇಜೋವಧೆ: ಗದ್ಗದಿತರಾದ ಸಚಿವೆ ಹೆಬ್ಬಾಳ್ಕರ್
ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನನ್ನ ತೇಜೋವಧೆ ಮಾಡಿದರು. ಮಾನಹಾನಿಕರ ಪದವನ್ನು ಅವರು ಒಮ್ಮೆಯಲ್ಲ, 10 ಬಾರಿ ಪುನರುಚ್ಚರಿಸಿದರು. ಅವರ ಹೇಳಿಕೆಯಿಂದ ತುಂಬಾ ನೋವುಂಟಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾವುಕರಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ, ಗುರುವಾರ ವಿಧಾನ ಪರಿಷತ್ ಅಧಿವೇಶನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ನಾವು ಧರಣಿ ನಡೆಸಿ ಮುಗಿಸಿದ್ದೆವು. ಬಳಿಕ ಸದನವನ್ನು ಸಭಾಪತಿ 10 ನಿಮಿಷ ಮುಂದೂಡಿದ್ದರು. ಈ ವೇಳೆ ಸಿ.ಟಿ.ರವಿಯವರು ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು 'ಡ್ರಗ್ಸ್ ಅಡಿಕ್ಟ್' ಅಂತ ಹೇಳಿದರು. ಅದನ್ನು ಕೇಳಿದ ನಾನು ತಾಳ್ಮೆಯಿಂದ ಸುಮ್ಮನಿದ್ದೆ. ಆದರೆ 3-4 ಬಾರಿ 'ಡ್ರಗ್ಸ್ ಅಡಿಕ್ಟ್' ಅಂತ ಅವರು ಪುನರುಚ್ಚಿಸಿದಾಗ ಪ್ರತಿಕ್ರಿಯಿಸಿದ ನಾನು "ನೀವೊಂದು ಅಪಘಾತ ಮಾಡಿಸಿದ್ರಲ್ಲ, ಹಾಗಾದರೆ ನೀವು ಕೊಲೆಗಾರನಾ?" ಎಂದು ಪ್ರಶ್ನಿಸಿದೆ. ಇದರಿಂದ ಕೋಪಗೊಂಡ ಸಿ.ಟಿ.ರವಿ ತನ್ನ ವಿರುದ್ಧ ಮಾನಹಾನಿಕರ ಪದ ಬಳಕೆ ಮಾಡಿದರು. ಒಂದಲ್ಲ ಹತ್ತು ಬಾರಿ ಅವರು ಆ ಪದವನ್ನು ಪುನರುಚ್ಚರಿಸಿದರು. ಇದು ತುಂಬಾ ದುಃಖವನ್ನು ಉಂಟು ಮಾಡಿದೆ. ಈ ಬಗ್ಗೆ ಸಭಾಪತಿಯವರಿಗೆ ದೂರು ನೀಡಿದ್ದೇನೆ ಎಂದು ಹೇಳಿದರು.
ಇದಕ್ಕೆಲ್ಲ ಹೆದರುವವಳು ನಾನಲ್ಲ. ಆದರೆ ನಾನು ಕೂಡಾ ಒಬ್ಬಳು ತಾಯಿ, ಅಕ್ಕ, ಅತ್ತೆ. ಈ ರೀತಿಯ ಹೇಳಿಕೆಯಿಂದ ತುಂಬಾ ನೋವಾಗಿದೆ ಎಂದು ಕಣ್ಣೀರಿಟ್ಟರು.
ಕಷ್ಟದಲ್ಲಿ ರಾಜಕೀಯದಲ್ಲಿ ಮೇಲೆ ಬಂದಿದ್ದೇನೆ. ಕೆಟ್ಟದ್ದನ್ನು ಕಂಡರೆ ದೂರ ಹೋಗುವವಳು ನಾನು. ಸಿ.ಟಿ.ರವಿ ಹೇಳಿಕೆಗೆ ಬಿಜೆಪಿಯವರು ಧೃತರಾಷ್ಟರಾದರು. ಅವರ ಹೇಳಿಕೆಯನ್ನು ಕೇಳಿದ ಕೆಲವರು ಬಂದು ನನ್ನ ಕಿವಿಯಲ್ಲಿ ಬಂದು ಕ್ಷಮೆ ಕೇಳಿದರು. ಆದರೆ ಯಾರು ಬಹಿರಂಗವಾಗಿ ಖಂಡಿಸದಿರುವುದು ಬೇಸರ ಉಂಟು ಮಾಡಿದೆ. ನನ್ನ ಪಕ್ಷದ ಸದಸ್ಯರು ಬೆನ್ನಿಗೆ ನಿಂತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಬೆನ್ನಿಗೆ ಇದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ ವ್ಯಕ್ತಪಡಿಸಿದರು.