ಮೈಸೂರಿನಲ್ಲಿ ಮರಗಳ ಹನನ: ವರದಿ ಕೇಳಿದ ಸರ್ಕಾರ

Update: 2025-04-20 23:38 IST
ಮೈಸೂರಿನಲ್ಲಿ ಮರಗಳ ಹನನ: ವರದಿ ಕೇಳಿದ ಸರ್ಕಾರ
  • whatsapp icon

ಮೈಸೂರು: ರಸ್ತೆ ಅಗಲೀಕರಣದ ಹೆಸರಿನಲ್ಲಿ 40 ಮರಗಳನ್ನು ಏಕಾಎಕಿ ಕಡಿದ ಪಾಲಿಕೆ ನಡೆ ಹಾಗೂ ಅನುಮತಿ ನೀಡಿದ ಅರಣ್ಯ ಇಲಾಖೆ ನಡೆಗೆ ವ್ಯಾಪಾಕ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರತೆ ಅರಿತ ಸರ್ಕಾರ ಮರ ಕಡಿಯುವ ಅಗತ್ಯವಿತ್ತೇ ಎಂಬ ಕುರಿತು ಏಳು ದಿನಗಳ ಒಳಗೆ ವರದಿ ನೀಡುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದೆ.

ಮೈಸೂರಿನ ಹೈದರಾಲಿ ರಸ್ತೆಯಲ್ಲಿದ್ದ 40 ಮರಗಳನ್ನು ಎ.14ರ ರಾತ್ರಿ ಏಕಾಎಕಿ ಮಹಾನಗರ ಪಾಲಿಕೆ ಕಡಿತಗೊಳಿಸಿತ್ತು. ಮುಂಜಾನೆ ಸಾರ್ವಜನಿಕರಿಗೆ ವಿಚಾರ ಅರಿಯುತ್ತಿದ್ದಂತೆ ವಿರೋಧವೂ ವ್ಯಕ್ತವಾಯಿತು. ಅದರ ನಂತರ ಗಂಧದಗುಡಿ ಫೌಂಡೇಶನ್‌, ಪರಿಸರ ಬಳಗ ಸೇರಿ 25ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ ಸಹ ನಡೆಸಿದವು. ಈ ನಡುವೆ ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವ ಸಂಘಟನೆಯ ರೈತರು ಕ್ರಿಯೆಗೆ ಪ್ರತಿಕ್ರಿಯೆ ಹೆಸರಿನಲ್ಲಿ ಮರಳಿ ಸಸಿ ನೆಟ್ಟು ವಿನೂತನವಾಗಿ ಪ್ರತಿಭಟಿಸಿದ್ದರು.

ಮಾತ್ರವಲ್ಲದೆ, ಗುರುವಾರ ರಾತ್ರಿ ಸಾವಿರಾರು ಮಂದಿ ಸಾರ್ವಜನಿಕರು ಮರಗಳ ಹನನಕ್ಕೆ ಶೋಕ ವ್ಯಕ್ತಪಡಿಸಿ ಮೊಂಬತ್ತಿ ಹಚ್ಚಿದ್ದರು. ಮಾತ್ರವಲ್ಲದೆ, ಅನುಮತಿ ನೀಡಿದ ಅರಣ್ಯ ಇಲಾಖೆ ಹಾಗೂ ಅನಗತ್ಯ ಕಾಮಗಾರಿ ನೆಪವೊಡ್ಡಿದ ಮಹಾನಗರ ಪಾಲಿಕೆಯನ್ನು ಮೌನ ಪ್ರತಿಭಟನೆ ಮೂಲಕವೇ ಖಂಡಿಸಿದ್ದರು. ಇದು ಮತ್ತಷ್ಟು ಚರ್ಚೆಗೂ ಕಾರಣವಾಗಿತ್ತು.

ಈ ನಡುವೆ ಅರಣ್ಯ ಇಲಾಖೆ ಮಹಾನಗರ ಪಾಲಿಕೆಯಿಂದ ರಸ್ತೆ ಅಗಲೀಕರಣಕ್ಕೆ ಬಂದ ಕೋರಿಕೆ ಮೇರೆಗೆ ಮರಗಳ ಹನನಕ್ಕೆ ಕಾನೂನು ಬದ್ಧವಾಗಿಯೇ ಅನುಮತಿ ನೀಡಿರುವುದಾಗಿ ತಿಳಿಸಿದ್ದರು. ಅಲ್ಲದೆ, ಮರಗಳ ಹನನ ಅಗತ್ಯವಿತ್ತೇ ಎಂಬಿತ್ಯಾದಿ ಅಧ್ಯಯನ ವರದಿ ನಡೆಸಿರುವ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ದಿನೇ ದಿನೇ ಸಾರ್ವಜನಿಕರ ವಿರೋಧ ಹೆಚ್ಚಾಗಿತ್ತು.

ಏಳು ದಿನದೊಳಗೆ ವರದಿಕೊಡಿ:

ಈ ಬೆಳವಣಿಗೆ ಅರಿತ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಬೆಂಗಳೂರು ಅರಣ್ಯಭವನದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಿಗೆ ಈ ಕೂಡಲೇ ವರದಿ ಕೊಡುವಂತೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ "ಬಹಳಷ್ಟು ಮರಗಳನ್ನು ಕಡಿಯುವುದು ಮನುಷ್ಯರನ್ನು ಕೊಲ್ಲುವಂತಿದೆ ಅಥವಾ ಅದಕ್ಕಿಂತಲೂ ಕೆಟ್ಟದಾಗಿದೆ” ಎಂದು ಘನ ಸುಪ್ರೀಂಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. ಆದರೆ, ಮೈಸೂರಿನ ಹೈದರಾಲಿ ರಸ್ತೆಯಲ್ಲಿ ಅನಗತ್ಯವಾಗಿ 40 ಬೃಹತ್ ಮರಗಳನ್ನು ಕಡಿದುರುಳಿಸಲಾಗಿದೆ. ಇದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿರುವುದು ಸೂಕ್ತವಲ್ಲ. ಇಲ್ಲಿ ರಸ್ತೆಯ ಅಗಲೀಕರಣ ಮಾಡುವ ಅಗತ್ಯವೇ ಇರಲಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಗಳು ಬಂದಿವೆ.

ಎ.18 ರ ಸಂಜೆ ಸಾವಿರಾರು ವೃಕ್ಷಪ್ರಿಯರು, ಪರಿಸರ ಪ್ರೇಮಿಗಳು ಮರ ಕಡಿದ ಜಾಗದಲ್ಲಿ ಮೇಣದ ಬತ್ತಿ ಹಿಡಿದು ಮೌನ ಪ್ರತಿಭಟನೆ ಮಾಡಿ, ಮರಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಇಡೀ ವಿಶ್ವ ಎದುರಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ವೃಕ್ಷ ಸಂರಕ್ಷಣೆ ಇಲಾಖೆ ಕರ್ತವ್ಯವಾಗಿದೆ. ಜೀವನವೂ ಇರಬೇಕು, ಜೀವನೋಪಾಯವೂ ನಡೆಯಬೇಕು, ಅಭಿವೃದ್ಧಿಯೂ ಆಗಬೇಕು, ಪ್ರಕೃತಿ ಪರಿಸರವೂ ಉಳಿಯಬೇಕು. ಈ ರೀತಿ ಸಮತೋಲಿತವಾಗಿ ಕ್ರಮ ವಹಿಸುವುದು ಇಂದಿನ ಅಗತ್ಯವಾಗಿದೆ.

ನಿಜಕ್ಕೂ ಇಲ್ಲಿ ರಸ್ತೆ ಅಗಲೀಕರಣದ ಅಗತ್ಯ ಇತ್ತೆ. ಮರ ಕಡಿಯುವ ಅಗತ್ಯವಿತ್ತೆ. ಮರ ಕಡಿತಲೆಗೆ ನಿಯಮಾನುಸಾರ ಕ್ರಮ ವಹಿಸಲಾಗಿದೆಯೇ ಎಂಬ ಬಗ್ಗೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಿ 7 ದಿನಗಳ ಒಳಗಾಗಿ ವರದಿ ಸಲ್ಲಸುವಂತೆ ಸೂಚಿದ್ದಾರೆ. ಆ ಮೂಲಕ ಮೈಸೂರಿನ ಮರಗಳ ಹನನ ವಿಚಾರ ಈಗ ರಾಜ್ಯ ಸರ್ಕಾರದ ಮಟ್ಟದ ಚರ್ಚೆಗೂ ಗ್ರಾಸವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News