ಮೈಸೂರು ಮಹಾರಾಣಿ ಕಾಲೇಜಿನ ಮೇಲ್ಛಾವಣಿ ಕುಸಿತ: ಅವಶೇಷಗಳಡಿ ಸಿಲುಕಿರುವ ಓರ್ವ ಕಾರ್ಮಿಕ

Update: 2025-01-28 14:46 GMT
ಮೈಸೂರು ಮಹಾರಾಣಿ ಕಾಲೇಜಿನ ಮೇಲ್ಛಾವಣಿ ಕುಸಿತ: ಅವಶೇಷಗಳಡಿ ಸಿಲುಕಿರುವ ಓರ್ವ ಕಾರ್ಮಿಕ
  • whatsapp icon

ಮೈಸೂರು: ಮೂರು ವರ್ಷಗಳ ಹಿಂದೆ ಶಿಥಿಲಗೊಂಡು ಕುಸಿದಿದ್ದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡದ ಮೇಲ್ಛಾವಣಿ ಮಂಗಳವಾರ ಪೂರ್ಣ ಕುಸಿದಿದ್ದು, ಓರ್ವ ಕಾರ್ಮಿಕ ಅವಶೇಷಗಳಡಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಮೂರು ದಿನಗಳಿಂದ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಿ ಮರು ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಏಕಾಏಕಿ ಮೇಲ್ಛಾವಣಿ ಕುಸಿದಿದೆ.

ಹಲವು ವರ್ಷಗಳ ನಿರಂತರ ಒತ್ತಾಯದ ಬಳಿಕ ಸರ್ಕಾರ ಕಾಮಗಾರಿಗೆ ಅನುಮೋದನೆ ನೀಡಿತ್ತು. ಗುತ್ತಿಗೆದಾರ ಚಂದ್ರ ಎಂಬವರು ಕಾಮಗಾರಿ ಆರಂಭಿಸಿದ್ದರು. ಮಂಗಳವಾರ 14 ಕಾರ್ಮಿಕರು ಕರ್ತವ್ಯದಲ್ಲಿ ನಿರತರಾಗಿದ್ದರು. ದಿನದ ಕೆಲಸ ಮುಗಿಸಿ ಮನೆಗೆ ತೆರಳಲು ಸಿದ್ಧರಾಗುತ್ತಿದ್ದರು. ಈ ವೇಳೆ ಕಟ್ಟಡದ ಒಳಗಡೆ ಇದ್ದ ಗೌಸಿಯಾನಗರದ ಸದ್ದಾಂ ಎಂಬವರು ಅವಶೇಷಗಳಡಿ ಸಿಲುಕಿದ್ದಾರೆ.

ಎರಡು ದಿನಗಳಿಂದ ಕಟ್ಟಡ ತೆರವು ಕಾರ್ಯದಲ್ಲಿ ನಿರತರಾಗಿದ್ದೆವು. ಎಲ್ಲ ಕೆಲಸ ಮುಗಿಯಿತು. ಟೀ ಕುಡಿದು ಬಂದು ಮನೆಗೆ ಹೋಗುವ ಸಿದ್ಧತೆಯಲ್ಲಿದ್ದವು. ಸದ್ದಾಂ ಬಟ್ಟೆ ಎತ್ತಿಕೊಂಡು ಬರಲು ಕಟ್ಟಡದ ಒಳಗಡೆ ಹೋದ ವೇಳೆ ಮೇಲ್ಚಾವಣಿ ಕುಸಿಯಿತು ಎಂದು ಕಾರ್ಮಿಕರೊಬ್ಬರು ತಿಳಿಸಿದರು.

ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ನಗರ ಪೊಲೀಸರು, ನಗರ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಅವಶೇಷಗಳಡಿ ಸಿಲುಕಿರುವ ವ್ಯಕ್ತಿಯನ್ನು ಹೊರತರಲು ಕಾರ್ಯಾಚರಣೆ ಆರಂಭಗೊಂಡಿತು. ಶಾಸಕ ಕೆ. ಹರೀಶ್‌ಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಮೂರು ವರ್ಷಗಳ ಹಿಂದೆ ಕಟ್ಟಡ ಕುಸಿದಿತ್ತು. ಜಿಲ್ಲಾ ಪಾರಂಪರಿಕ ಸಮಿತಿ ಅನುಮೋದನೆಯ ಮೇರೆಗೆ ಹೊಸದಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಒಬ್ಬ ಕಾರ್ಮಿಕ ಅವಶೇಷಗಳಡಿ ಸಿಲುಕಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ಕಾರ್ಯಾಚರಣೆ ನಡೆಯುತ್ತಿದೆ.

-ಕೆ. ಹರೀಶ್‌ಗೌಡ, ಶಾಸಕ.

ಶಿಥಿಲಗೊಂಡ ಕಟ್ಟಡ ತೆರವು ಕಾರ್ಯದ ವೇಳೆ ಮೇಲ್ಛಾವಣಿ ಕುಸಿದಿದೆ. 13 ನೌಕರರು ಹೊರಗೆ ಬಂದಿದ್ದಾರೆ. ಒಬ್ಬರು ಸಿಲುಕಿಕೊಂಡಿದ್ದಾರೆ. ಪಾಲಿಕೆ ಜಿಲ್ಲಾಡಳಿತ, ಅಗ್ನಿಶಾಮಕ ಸಿಬ್ಬಂದಿ ಕಟ್ಟಡ ತ್ಯಾಜ್ಯ ತೆಗೆಯುತ್ತಿದ್ದಾರೆ. ಮುಂಜಾಗ್ರತಾ ಕ್ರಮ ವಹಿಸದಿರುವ ಬಗ್ಗೆ ಮತ್ತು ಲೋಪದೋಷದ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ.

-ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾಧಿಕಾರಿ

 

 

 

 

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News