ಮೈಸೂರು | ಉದಯಗಿರಿ ಕಲ್ಲು ತೂರಾಟ ಪ್ರಕರಣ : 8 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು

ಉದಯಗಿರಿ ಕಲ್ಲು ತೂರಾಟ ಪ್ರಕರಣ : 8 ಮಂದಿಯ ಬಂಧನ
ಮೈಸೂರು : ಉದಯಗಿರಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಎಂಟು ಮಂದಿಯನ್ನು ಬುಧವಾರ ಬಂಧಿಸಿದ್ದಾರೆ.
ಸುಹೇಲ್, ರಾಹಿಲ್, ಅಯಾನ್, ಸೈಯದ್ ಸಾದಿಕ್, ಶೋಹೇಬ್ ಪಾಷಾ, ಸಾದಿಕ್ ಪಾಷಾ, ಅರ್ಬಾಝ್ ಷರೀಫ್, ಇಜಾಝ್ ಬಂಧಿತರು.
ಘಟನೆ ಸಂಬಂಧ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದರೊಂದಿಗೆ ಘಟನೆಯಲ್ಲಿ ಭಾಗಿಯಾಗಿದ್ದ 60 ಮಂದಿಯ ಗುರುತು ಪತ್ತೆ ಮಾಡಿರುವ ಪೊಲೀಸರು ಅವರ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪೊಲೀಸ್ ಠಾಣೆ ಎದುರು ಸೇರಿದಂತೆ ಮುಖ್ಯ ರಸ್ತೆಯಲ್ಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು ಕೃತ್ಯದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚುತ್ತಿದ್ದಾರೆ. ಜತೆಗೆ ಸಿಸಿಬಿಯ ತಾಂತ್ರಿಕ ತಂಡ ಘಟನಾ ಸ್ಥಳದಲ್ಲಿ ಇದ್ದ ಮೊಬೈಲ್‌ಗಳ ಸಂಖ್ಯೆಯನ್ನು ಟವರ್ ಮೂಲಕ ಪತ್ತೆ ಹಚ್ಚಿ ಯಾರ್ಯಾರು ಘಟನಾ ಸ್ಥಳದಲ್ಲಿ ಇದ್ದರು ಎಂಬುದರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜತೆಗೆ ಪೊಲೀಸರು ಸಹ ತಮ್ಮೊಂದಿಗೆ ಇಟ್ಟು ಕೊಂಡಿದ್ದ ಬಾಡಿ ವೋರ್ನ್ ಕ್ಯಾಮೆರಾದಲ್ಲಿ ಸಿಕ್ಕಿರುವ ದೃಶ್ಯಗಳನ್ನು ಇಟ್ಟುಕೊಂಡು ಆರೋಪಿಗಳ ಸುಳಿವಿಗೆ ಜಾಲ ಬೀಸಿದ್ದಾರೆ ಎನ್ನಲಾಗಿದೆ.
ಕಲ್ಲು ತೂರಾಟ ವೇಳೆ ಠಾಣೆ ಎದುರಿನ ಮಹದೇವಪುರ ರಸ್ತೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಸೇರಿದ್ದು, ಈ ವೇಳೆ ಕೆಲ ಕಿಡಿಗೇಡಿಗಳು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸುವುದರೊಂದಿಗೆ ಪೊಲೀಸ್ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಜಖಂಗೊಳಿಸಿದ್ದರು. ಜತೆಗೆ 7 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಗಾಯಗೊಂಡಿದ್ದರು.