150 ಕೋಟಿ ರೂ. ಖರ್ಚು ಮಾಡಿ ತಯಾರಿಸಿದ ಜಾತಿಗಣತಿ ವರದಿಯನ್ನು ರಾಜ್ಯದ ಜನತೆಗೆ 'ಗುಮ್ಮ'ನ ರೀತಿ ತೋರಿಸುತ್ತಿದ್ದಾರೆ: ಎಚ್.ಡಿ.ಕುಮಾರಸ್ವಾಮಿ

ಎಚ್.ಡಿ.ಕುಮಾರಸ್ವಾಮಿ
ಮೈಸೂರು:150 ಕೋಟಿ ರೂ ಖರ್ಚು ಮಾಡಿ ತಯಾರಿಸಿದ ಜಾತಿ ಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವೈಯುಕ್ತಿಕ ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ರಾಜ್ಯದ ಜನರಿಗೆ ವರದಿಯನ್ನು ’ಗುಮ್ಮ’ನ ರೀತಿ ತೋರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದರು.
ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 150 ಕೋಟಿ ಖರ್ಚು ಮಾಡಿ ಸಿದ್ಧರಾಮಯ್ಯ ಅವರು ಜಾತಿಗಣತಿ ಮಾಡಿಸಿದರು. ಅದನ್ನು ಬಿಡುಗಡೆ ಮಾಡಲು ಹಿಡಿದುಕೊಂಡು ಇನ್ನೂ ಅಲ್ಲಾಡಿಸುತ್ತಲೇ ಇದ್ದಾರೆ. ಸ್ವೀಕಾರ ಮಾಡಿದ ವರದಿಗೆ ಕಾವೇರಿಯಲ್ಲಿ ಇಟ್ಟುಕೊಂಡು ಗಂಧದಕಡ್ಡಿ ಹಚ್ಚುತ್ತಿದ್ದೀರ ಎಂದು ಪ್ರಶ್ನಿಸಿದರು.
ಚನ್ನಗಿರಿಯ ಕಾಂಗ್ರೆಸ್ ಶಾಸಕರೇ ಜಾತಿಗಣತಿ ನಮ್ಮ ಮನೆಯಲ್ಲಿ ಮಾಡಿಲ್ಲ ಎಂದು ಹೇಳಿದ್ದಾರೆ. ಅದು ವೈಜ್ಞಾನಿಕವಾಗಿದ್ದರೆ ಜಾರಿ ಮಾಡಬೇಕಿತ್ತು. ಜಾತಿಗಣತಿ ಹೆಸರೇಳಿಕೊಂಡು ರಾಜಕೀಯ ಲಾಭಕ್ಕಾಗಿ ಸಮಾಜ ಒಡೆದು ವೈಯಕ್ತಿಕ ಆಸೆ ಆಕಾಂಕ್ಷೆ ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಜಾತಿಗಣತಿ ವರದಿ ವೈಜ್ಞಾನಿಕವಾಗಿಲ್ಲ ಎಂಬ ಅನುಮಾನ ಹಲವರಿಗದೆ ಎಂದು ವಾಗ್ದಾಳಿ ನಡೆಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಸಚಿವ ಪುಟ್ಟರಂಗಶೆಟ್ಟಿ ವರದಿ ಸ್ವೀಕರಿಸಲು ಹೋದರು ಕುಮಾರಸ್ವಾಮಿ ಬಿಡಲಿಲ್ಲ ಎಂದು ಆರೋಪಿಸುವ ಸಿದ್ಧರಾಮಯ್ಯ ಅವರಿಗೆ 136 ಸ್ಥಾನ ಬಂದಿದಿಯಲ್ಲಾ ಈಗ ಬಿಡುಗಡೆ ನಿಮ್ಮನ್ನು ಯಾರು ಹಿಡಿದುಕೊಂಡಿದ್ದಾರೆ? ಎಂದು ಪ್ರಶ್ನಿಸಿದರು.
ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದವರನ್ನು ಬಲಿಹಾಕಬೇಕು:
ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಮೂಟೆಗಟ್ಟಲೆ ಕಲ್ಲು ತೆಗೆದುಕೊಂಡು ಬಂದು ಹೊಡೆದವರನ್ನ ರಕ್ಷಣೆ ಮಾಡಬೇಕಾ? ಕ್ರಮ ತೆಗೆದುಕೊಳ್ಳಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ. ಕುವೆಂಪು ಅವರ ಸಂದೇಶ ಜಾರಿಗೆ ಬರಬೇಕು. ರಾಜ್ಯ ಸರ್ವಜನಾಂಗದ ಶಾಂತಿಯ ತೋಟ ಆಗಿ ಉಳಿಯಬೇಕು. ಪೊಲೀಸ್ ವಾಹನದ ಮೇಲೆ ಕಲ್ಲು ತೂರಿದವರನ್ನ ಬಲಿ ಹಾಕಬೇಕು. ಎಷ್ಟು ದಿನ ಅಂತ ಇದನ್ನ ಸಹಿಸಿಕೊಳ್ಳುತ್ತೀರಿ ಎಂದು ಕೇಳಿದರು.
ಯಾರನ್ನೋ ಓಲೈಸಲು ಸರ್ಕಾರ ಇಲ್ಲ. ಕಾನೂನು ಬಾಹಿರ ಚಟುವಟಿಕೆ ನಡೆಸುವವನು ಯಾರೇ ಇರಲಿ ಕ್ರಮ ತೆಗೆದುಕೊಳ್ಳಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ. ಮೂಟೆಗಟ್ಟಲೆ ಕಲ್ಲು ತೆಗೆದುಕೊಂಡು ಬಂದು ಹೊಡೆದುವವರನ್ನ ರಕ್ಷಣೆ ಮಾಡಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ಈ ಸರ್ಕಾರ ಯಾರಿಗೆ ರಕ್ಷಣೆ ಕೊಡುತ್ತದೆ. ಮಂತ್ರಿಗಳೊಬ್ಬರು ಮರಾಠಿಯಲ್ಲೇ ಭಾಷಣ ಮಾಡಿದ್ದಾರೆ. 2006-07 ರಲ್ಲಿ ನಾನು ಸಿಎಂ ಆಗಿದ್ದೆ. ಮನಮೋಹನ್ ಸಿಂಗ್ ಬಳಿ ನಿಯೋಗ ಹೋಗಿದ್ದರು. ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.
ಗೃಹ ಸಚಿವರು ರಾಜೀನಾಮೆ ನೀಡುವ ಮಾತನ್ನಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ಗೃಹಸಚಿವರಿಗೆ ಪೊಲಿಟಿಕಲ್ ವೈರಾಗ್ಯ ಬಂದು ಆಗಿದೆ. ಮರ್ಯಾದಸ್ಥರು ಇರುವುದು ಒಳ್ಳೆಯದಲ್ಲ ಎಂದು ಅನಿಸಿರಬೇಕು ಎಂದು ವ್ಯಂಗ್ಯವಾಡಿದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಕಾಡುತ್ತಿದೆ. ಹಲವು ದಿನಗಳ ಬಳಿಕ ಈವತ್ತೇ ಮನೆಯಿಂದ ಹೊರ ಬಂದಿರುವುದು. 19 ನೇ ಕಂತಿನ ಕಿಸಾನ್ ಹಣ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನಿಮೋದಿ ಅವರ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಇಂದು ಭಾಗಿಯಾಗಲಿದ್ದೇನೆ ಎಂದರು.
ರೈತರು, ಮಹಿಳೆಯರು, ಯುವಕರು, ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡುವುದು ಈ ಬಾರಿಯ ಬಜೆಟ್ ಆಶಯವಾಗಿದೆ. ಈ ಬಾರಿ 50 ಲಕ್ಷ ಕೋಟಿ ರೂ ಆಯವ್ಯಯ ಮಂಡನೆ ಮಾಡಲಾಗಿದೆ. 11.20 ಲಕ್ಷ ಕೋಟಿ ರೂ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಗೆ ತೀರ್ಮಾನ ಮಾಡಲಾಗಿದೆ. ರೈತರ ಕೃಷಿವಲಯಕ್ಕೆ 1.72 ಲಕ್ಷ ರೂ ಅನುದಾನ ನೀಡಲಾಗುತ್ತಿದೆ. ಹಿಂದುಳಿದ ನೂರು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸ್ಟಾರ್ಟಪ್ ಗಳ ಮೂಲಕ ಆ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಮೀನುಗಾರಿಕೆ, ಹೈನುಗಾರಿಕೆ, ಚರ್ಮೋದ್ಯಮಕ್ಕೆ ಒತ್ತು, ಯುವಕರಿಗೆ ಲೆದರ್ ಇಂಡಸ್ಟ್ರಿ ಮೂಲಕ ಉದ್ಯೋಗ ಸೃಷ್ಠಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಚಿವರುಗಳಾಸ ಸಾ.ರಾ.ಮಹೇಶ್, ಪುಟ್ಟರಾಜು, ಮಾಜಿ ಶಾಸಕ ಅಶ್ವಿನ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ರಾಜ್ಯ ವಕ್ತಾರ ರವಿಚಂದ್ರೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.