ಮುಡಾ ಪ್ರಕರಣದಲ್ಲಿ ಬಿ. ರಿಪೋಟ್೯ ಸಲ್ಲಿಸಿರುವ ಲೋಕಾಯುಕ್ತ ಸಂಸ್ಥೆಯನ್ನು ದೇವರೇ ಕಾಪಾಡಬೇಕು : ಎಚ್.ಡಿ.ಕುಮಾರಸ್ವಾಮಿ

Update: 2025-02-24 22:18 IST
ಮುಡಾ ಪ್ರಕರಣದಲ್ಲಿ ಬಿ. ರಿಪೋಟ್೯ ಸಲ್ಲಿಸಿರುವ ಲೋಕಾಯುಕ್ತ ಸಂಸ್ಥೆಯನ್ನು ದೇವರೇ ಕಾಪಾಡಬೇಕು : ಎಚ್.ಡಿ.ಕುಮಾರಸ್ವಾಮಿ

ಎಚ್.ಡಿ.ಕುಮಾರಸ್ವಾಮಿ

  • whatsapp icon

ಮೈಸೂರು: ಮುಡಾ‌ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ನಾಲ್ವರು ಆರೋಪಿಗಳ ಅಪರಾಧದ ಕುರಿತು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿರುವ ಲೋಕಾಯುಕ್ತ ಸಂಸ್ಥೆಯನ್ನು ದೇವರೇ ಕಾಪಾಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಮುಡಾ‌ ಹಗರಣದಲ್ಲಿ ಏನೆಲ್ಲ ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸರಕಾರ ನಡೆಸುವ ಮುಖ್ಯಮಂತ್ರಿ ಅವರಿಗೆ ಇಷ್ಟಬಂದಂತೆ, ಅನುಕೂಲ ಆಗುವಂತೆ ಲೋಕಾಯುಕ್ತ ವರದಿಯನ್ನು ಬರೆಸಿಕೊಂಡಿದ್ದಾರೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು‌ ಹೋಗಲು ಸಾಧ್ಯವಿಲ್ಲ. ಕಾರಣ, ಪ್ರತಿ ಹಂತದಲ್ಲಿಯೂ ಸರ್ಕಾರ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದೆ. ಈ‌ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ನಮಗೆ ಕಿರುಕುಳ ನೀಡಲಾಗುತ್ತಿದೆ. ನಮ್ಮ ಜಮೀನು ತನಿಖೆಗೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಐಎಎಸ್ ಎಸ್ ಐಟಿ ರಚನೆ ಮಾಡಲಾಗಿದೆ. ಐವರು ಐಎಎಸ್ ಅಧಿಕಾರಿಗಳನ್ನು ಎಸ್ ಐಟಿಗೆ ನೇಮಕ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

40 ವರ್ಷದ ಹಿಂದೆ ನಾನು ಇದೇ ಮೈಸೂರಿನಲ್ಲಿ ಸಿನಿಮಾ ಹಂಚಿಕೆದಾರನಾಗಿದ್ದಾಗ ಕಷ್ಟಪಟ್ಟು ಸಂಪಾದನೆ ಮಾಡಿದ ಜಮೀನು ಅದಾಗಿದೆ. 14 ಎಕರೆ ಒತ್ತುವರಿಯಾಗಿದೆ ಎಂದು ಆರೋಪ ಮಾಡಿದ್ದಾರೆ. ನಾನು ಹಿಂದೆಯೇ ಅವರಿಗೆ ಪತ್ರ ಬರೆದು, ಸರ್ವೇ ಮಾಡಿಕೊಳ್ಳಿ. ಒತ್ತುವರಿ ಆಗಿದ್ದರೆ ವಾಪಸ್ ಪಡೆದುಕೊಳ್ಳಿ ಎಂದು ಹೇಳಿದ್ದೇನೆ. ತನಿಖೆ ನಡೆಸಿ ವಶಕ್ಕೆ ತೆಗೆದುಕೊಳ್ಳಿ ಎಂದು ಪತ್ರವನ್ನೇ ಬರೆದಿದ್ದೆ. ಆದರೆ, ನನ್ನ ಮನವಿ ಅಲಕ್ಷ್ಯ ಮಾಡಿ ನಲವತ್ತು ವರ್ಷಗಳಿಂದ ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಮೂಲ ದಾಖಲೆಗಳೆ ಇಲ್ಲ ಎಂದು ಸರ್ಕಾರವೇ ಹೇಳುತ್ತಿದೆ. ಆದರೆ, ಈಗ ಮೂಲ ಮಾಲೀಕರು ಹುಟ್ಟಿಕೊಂಡಿದ್ದಾರೆ.ಅವರು ಯಾರು? ಎಲ್ಲಿಂದ ಬಂದರು? ಯಾರು ಕರೆದುಕೊಂಡು ಬಂದರು ಎನ್ನುವ ಮಾಹಿತಿ ನನಗಿದೆ. ಇದರ ಬಗ್ಗೆ ಇಂಟರ್ ನ್ಯಾಷನಲ್ ಸರ್ವೇ ಮಾಡಿಸಲಿ ನಾನೇನು ಹೆದರುವ ವ್ಯಕ್ತಿ ಅಲ್ಲ. ಸಿಎಂ ಸಿದ್ದರಾಮಯ್ಯ‌ ಸತ್ಯ‌ಹರಿಶ್ಚಂದ್ರರೇ? ಹಿನಕಲ್‌ ಸಾಕಮ್ಮನ ಜಮೀನು ವಿವಾದ ಯಾವುದು? ಅದಕ್ಕೂ ಸಿದ್ದರಾಮಯ್ಯ ಅವರಿಗೂ ಏನು ಸಂಬಂಧ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News