ಉದಯಗಿರಿ ಗಲಭೆ ಪ್ರಕರಣ: ಮೈಸೂರು ನಗರದಾದ್ಯಂತ ಒಂದು ದಿನ ನಿಷೇಧಾಜ್ಞೆ ಜಾರಿ

Update: 2025-02-23 19:00 IST
ಉದಯಗಿರಿ ಗಲಭೆ ಪ್ರಕರಣ: ಮೈಸೂರು ನಗರದಾದ್ಯಂತ ಒಂದು ದಿನ ನಿಷೇಧಾಜ್ಞೆ ಜಾರಿ
  • whatsapp icon

ಮೈಸೂರು: ಉದಯಗಿರಿ ಪೊಲೀಸ್ ಠಾಣಾ ಆವರದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಖಂಡಿಸಿ ಸೋಮವಾರ ಆಯೋಜಿಸಿದ್ದ ಜನ ಜಾಗೃತಿ ರ‍್ಯಾಲಿ ಮತ್ತು ಸಮಾವೇಶಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ರಾಷ್ಟ್ರಸುರಕ್ಷ ಜನಾಂದೋಲನ ಸಮಿತಿಯಿಂದ ಫೆ. 24ರಂದು ಬೆಳಗ್ಗೆ 11 ಗಂಟೆಗೆ ಜೆಎಸ್‌ಎಸ್ ಮಹಾವಿದ್ಯಾಪೀಠದ ಆವರಣದಲ್ಲಿ ಮೈಸೂರು ಚಲೋ ಹಾಗೂ ಬೃಹತ್ ಜನಾಂದೋಲನ ರ‍್ಯಾಲಿ ಮತ್ತು ಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಲಿದ್ದರು.

ಗಾಂಧಿನಗರದ ದಲಿತ ಮಹಾಸಭಾ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಫೆ. 24ರಂದು ಮಧ್ಯಾಹ್ನ 12 ಗಂಟೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಮೌನ ಮೆರವಣಿಗೆ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ಎರಡೂ ಸಮಾವೇಶಗಳಿಗೂ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅನುಮತಿ ನಿರಾಕರಿಸಿದ್ದಾರೆ.

ಉಭಯ ಸಂಘಟನೆಗಳವರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಷ್ಠೆಯ ರೂಪದಲ್ಲಿ ಪರ ವಿರೋಧ ಪೋಸ್ಟ್ ಗಳನ್ನು ಹಾಕುತ್ತಿರುವುದಾಗಿ ಮಾಹಿತಿ ಬಂದಿದೆ. ಸಮಾವೇಶ ಹಮ್ಮಿಕೊಂಡಿರುವ ಸ್ಥಳದಲ್ಲಿ ವಾಹನ ಸಂಚಾರ ದಟ್ಟಣೆ, ಎಲ್ಲ ಧರ್ಮದ ಜನರು, ಪ್ರವಾಸಿಗರು ಸೇರುವ ಸ್ಥಳವಾಗಿದೆ. ಅಲ್ಲದೇ ಮೂರು ಸಮಿತಿಗಳು ಒಂದೇ ದಿನ, ಒಂದೇ ಸಮಯ, ಒಂದೇ ಮಾರ್ಗ ಹಾಗೂ ಸ್ಥಳದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ.

ಸಮಾವೇಶಗಳಿಗೆ ಹೊರ ಜಿಲ್ಲೆ ಹಾಗೂ ನಗರದ ವಿವಿಧ ಬಡಾವಣೆಗಳಿಂದ ಹೆಚ್ಚಿನ ಕಾರ್ಯಕರ್ತರು ಸೇರುವವರಿದ್ದು, ಪರ ವಿರೋಧ ಘೋಷಣೆಗಳನ್ನು ಕೂಗಿ ಘರ್ಷಣೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಕೆಲವು ಕೋಮು ಸೂಕ್ಷ್ಮ ಪ್ರದೇಶಗಳಿಂದ ಬೈಕ್, ಆಟೋ, ಬೇರೆ ರೀತಿಯ ವಾಹನಗಳ ಮೂಲಕ ಹಾಗೂ ಕಾಲ್ನಡಿಗೆಯಲ್ಲಿ ಪ್ಲಾಗ್, ಧ್ವನಿವರ್ಧಕ, ಬಂಟಿಂಗ್ಸ್ ಗಳನ್ನು ಕಟ್ಟಿಕೊಂಡು ರ‍್ಯಾಲಿ ಮಾಡುವ ಸಾಧ್ಯತೆ ಇರುತ್ತದೆ.

ಯಾವುದೇ ರೀತಿಯ ಪರ ವಿರೋಧದ ಚಟುವಟಿಕೆಗಳು ನಡೆದರೂ ಸಹ ಸಾರ್ವಜನಿಕ ಶಾಂತಿ ಸಹಬಾಳ್ವೆಗೆ ಕೋಮು ಸೌಹಾರ್ದತೆ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟಾಗಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತದೆ ಎಂದು ಬಿಎನ್‌ಎಸ್‌ಎಸ್ 163ರ ಪ್ರಕಾರ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿರುತ್ತಾರೆ.

ರ‍್ಯಾಲಿ ಮತ್ತು ಸಮಾವೇಶದಿಂದ ಕೋಮು ಸೌಹಾರ್ದತೆ, ಸಾರ್ವಜನಿಕ ಹಿತಾಸಕ್ತಿ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗುವುದರಿಂದ ಫೆ. 23ರ ಮಧ್ಯರಾತ್ರಿಯಿಂದ ಫೆ. 24ರ ಮಧ್ಯರಾತ್ರಿವರೆಗೆ ಮೈಸೂರು ನಗರದಾದ್ಯಂತ ಬಿಎನ್‌ಎಸ್ ಕಾಯಿದೆ ಪ್ರಕಾರ ನಿಷೇಧಾಜ್ಞೆ ಘೋಷಿಸಲಾಗಿದೆ.

-ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ.

ಮೈಸೂರಿನ ಉದಯಗಿರಿಯಲ್ಲಿ ಇತ್ತೀಚೆಗೆ ನಡೆದ ಗಲಭೆಯನ್ನು ಖಂಡಿಸಿ, ಸಮಗ್ರ ತನಿಖೆಯನ್ನು ಮೂಲಕ ನಡೆಸಬೇಕೆಂದು ಆಗ್ರಹಿಸಿ ನಾಳೆ ರಾಷ್ಟ್ರ ಸುರಕ್ಷ ಜನಾಂದೋಲನ ಸಮಿತಿಯಿಂದ ನಡೆಯುವ ಮೈಸೂರು ಚಲೋ, ಬೃಹತ್ ಜನಜಾಗೃತಿ ಸಭೆಯು ನಿಶ್ಚಿತ ಸ್ಥಳದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಮೈಸೂರು ಪೊಲೀಸರು ಅನುಮತಿ ನೀಡಿಲ್ಲ. ಹಾಗಾಗಿ ಈ ಸಂಬಂಧ ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯದ ಮೂಲಕ ಅನುಮತಿ ಸಿಗುವ ಭರವಸೆ ಇದೆ.

-ಮಹೇಶ್ ಕಡಗದಾಳು, ಸಮಿತಿ ಸಂಚಾಲಕ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News