ಹಕ್ಕಿಜ್ವರ ಭೀತಿ: ಮೈಸೂರು ಮೃಗಾಲಯದಲ್ಲಿ ಕಟ್ಟೆಚ್ಚರ

ಮೈಸೂರು: ರಾಯಚೂರು, ಬಳ್ಳಾರಿ ಮತ್ತು ಚಿಕ್ಕಾಬಳ್ಳಾಪುರ ಜಿಲ್ಲೆ ಸೇರಿ ಪಕ್ಕದ ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿಯೂ ಹೈ ಅಲರ್ಟ್ ಆಗಿದ್ದಾರೆ.
ಚಾಮರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಡಿ.ರಂಗಸ್ವಾಮಿ ಈ ಕುರಿತು ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿ ಕಟ್ಟೆಚ್ಚರವಹಿಸಿದ್ದು, ಮೃಗಾಲಯದಲ್ಲಿರುವ ಪ್ರಾಣಿಪಕ್ಷಿ ಸಂಕುಲಕ್ಕೆ ಯಾವುದೇ ತೊಂದರೆ ಆಗದಂತೆ ನಿಗಾವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಣಿ-ಪಕ್ಷಿಗಳ ಪಾಲಕರು ಒಂದು ಪಕ್ಷಿ ಮನೆಯಿಂದ ಇನ್ನೊಂದು ಮನೆಗೆ ಹೋಗುವಂತಿಲ್ಲ. ಪ್ರವೇಶ ದ್ವಾರದಲ್ಲೇ ಫುಟ್ ಟಿಬ್ಸ್ ಅಳವಡಿಸಿದ್ದೇವೆ, ಅದರಲ್ಲಿ ಕಾಲನ್ನು ಅದ್ದಿದ ನಂತರ ಜನರು ಬರಬೇಕು ಎಂದು ತಿಳಿಸಿದರು.
ಮೃಗಾಲಯದಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳಲು ಸೂಚಿಸಿದ್ದೇವೆ. ಪಕ್ಷಿಗಳ ಇಕ್ಕೆಗಳನ್ನು ಸಂಗ್ರಹಿಸಿ ಪ್ರಯೋಗ ಶಾಲೆಗೆ ಕಳುಹಿಸಿಕೊಡಲಾಗಿದೆ. ನಮ್ಮಲ್ಲಿ ಹಕ್ಕಿ ಜ್ವರದಂತಹ ಪ್ರಕರಣಗಳು ಇಲ್ಲಿಯವರೆಗೂ ಕಂಡು ಬಂದಿಲ್ಲ.ಮಾಂಸಾಹಾರಿ ಪ್ರಾಣಿಗಳಿಗೆ ತರುವ ಚಿಕನ್ ಮಾಂಸವನ್ನು ಪೊಟಾಷಿಯಂ ಪರಮೋನೈಟ್ ನಿಂದ ತೊಳೆದು ಕೊಡಲಾಗುತ್ತದೆ. ರೋಗಗ್ರಸ್ತ ಕೋಳಿ ಮಾಂಸವನ್ನು ಕೊಡುವುದಿಲ್ಲ. ನಮ್ಮಲ್ಲಿರುವ ಪಕ್ಷಿಗಳಿಗೆ ಯಾವುದೇ ರೋಗ ರುಜಿನಗಳು ಕಂಡು ಬಂದಿಲ್ಲ ಎಂದು ಹೇಳಿದರು.
ಕೋಳಿ ಸಾಗಾಣೆ, ಮಾರಾಟದ ಮೇಲೂ ನಿಗಾ:
ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಮೈಸೂರಿನ ಎಲ್ಲಾ ಕೋಳಿ ಸಾಗಾಣಿಕೆ ಕೇಂದ್ರ, ಮಾರಾಟ ಮಳಿಗೆಗಳಲ್ಲಿಯೂ ಮುನ್ನೆಚ್ಚರಿಕೆ ಕ್ರಮಕ್ಕೆ ಜಾಗೃತಿ ಮೂಡಿಸಲಾಗಿದೆ. ಹಕ್ಕಿ ಜ್ವರ ಮನುಷ್ಯರಿಂದ ಮನುಷ್ಯರಿಗೆ ಹರಡಲ್ಲ. ಬದಲಿಗೆ ಮನುಷ್ಯರ ಮೂಲಕ ಬದಲಿ ಹಕ್ಕಿ, ಕೋಳಿಗಳಿಗೆ ಹರಡಲಿದೆ. ಹೀಗಾಗಿ ಸೋಂಕು ಜಿಲ್ಲೆ ಪ್ರವೇಶಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.