ಕ್ಷೇತ್ರ ಪುನರ್‌ ವಿಂಗಡಣೆ ವಿಚಾರದಲ್ಲಿ ಕೇಂದ್ರ ಅರ್ಧ ಸತ್ಯ ಮಾತ್ರ ಹೇಳುತ್ತಿದೆ : ಅಭಿಷೇಕ್ ಮನು ಸಿಂಘ್ವಿ

Update: 2025-03-15 19:15 IST
ಕ್ಷೇತ್ರ ಪುನರ್‌ ವಿಂಗಡಣೆ ವಿಚಾರದಲ್ಲಿ ಕೇಂದ್ರ ಅರ್ಧ ಸತ್ಯ ಮಾತ್ರ ಹೇಳುತ್ತಿದೆ : ಅಭಿಷೇಕ್ ಮನು ಸಿಂಘ್ವಿ
  • whatsapp icon

ಮೈಸೂರು : ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯ ವಿಚಾರವಾಗಿ ಕೇಂದ್ರ ಸರಕಾರ ಕೇವಲ ಅರ್ಧ ಸತ್ಯ ಮಾತ್ರ ಹೇಳುತ್ತಿದೆ ಎಂದು ಎಐಸಿಸಿ ರಾಷ್ಟ್ರೀಯ ವಕ್ತಾರ ಹಾಗೂ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾಗ್ದಾಳಿ ನಡೆಸಿದರು.

ಶನಿವಾರ ನಗರದ  ಕಾಂಗ್ರೆೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ಪುನರ್ ವಿಂಗಡಣೆ ಕುರಿತು ಯಾವ ಪಕ್ಷಗಳ ಸಭೆಯನ್ನು ಕರೆದಿಲ್ಲ. ಭಾಗಿದಾರರ ಜತೆ ಮಾತುಕತೆ ನಡೆಸಿಲ್ಲ. ತಾವೇ ಮೂವರು ಕುಳಿತುಕೊಂಡು ನಿರ್ಣಯ ಮಾಡಿಕೊಂಡು ವಿಂಗಡಣೆ ಕಾರ್ಯಕ್ಕೆೆ ಮುಂದಾಗಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆ ಮಾಡುತ್ತೇವೆ. ಆದರೆ ಸಂಖ್ಯೆೆ ಹೆಚ್ಚಳವಾಗುವುದಿಲ್ಲ ಎನ್ನುತ್ತಾರೆ. ಸಂಖ್ಯೆೆ ಹೆಚ್ಚಳವಾಗುವುದಿಲ್ಲ ಎಂದರೆ ಒಬ್ಬರಿಂದ ಕಿತ್ತು ಮತ್ತೊಬ್ಬರಿಗೆ ನೀಡಬೇಕು. ಅಲ್ಲದೇ ಉತ್ತರ ಭಾರತದ ರಾಜ್ಯಗಳಲ್ಲಿ ಕ್ಷೇತ್ರಗಳು ಹೆಚ್ಚಳವಾಗುವ ಬಗ್ಗೆೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಮೌನವಾಗಿದ್ದಾರೆ ಎಂದು ಕಿಡಿಕಾರಿದರು.

ಇವಿಎಂ ಬಗ್ಗೆ ತಕರಾರು ಇಲ್ಲ:

ವಿದ್ಯುನ್ಮಾನ ಮತ ಯಂತ್ರಗಳ ( ಇವಿಎಂ) ಬಗ್ಗೆೆ ನಮ್ಮದೇನೂ ತಕರಾರು ಇಲ್ಲ. ಆದರೆ ಚುನಾವಣೆ ಪ್ರಕ್ರಿಯೆಯಲ್ಲಿ ಅವುಗಳು ಬಳಕೆಯಾಗುತ್ತಿರುವ ಬಗ್ಗೆೆ ಮಾತ್ರ ತಕರಾರು ಇದೆ. ಲಕ್ಷಾಂತರ ಯಂತ್ರಗಳಲ್ಲಿ ಕೇವಲ ಶೇ.15ರಷ್ಟು, ಶೇ.23ರಷ್ಟು ಮಾತ್ರ ಪರಿಶೀಲನೆ ಮಾಡುತ್ತೇವೆ ಎನ್ನುತ್ತಾರೆ. ಆದರೆ ಉಳಿದ ಯಂತ್ರಗಳನ್ನು ಏಕೆ ಪರಿಶೀಲನೆ ಮಾಡಬಾರದು ಎನ್ನುವುದು ನಮ್ಮ ಪ್ರಶ್ನೆೆಯಾಗಿದೆ. ಮಹಾರಾಷ್ಟ್ರದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ನಡುವಿನ ಅಂತರದಲ್ಲಿ ಸುಮಾರು 43 ಲಕ್ಷ ಮತಗಳು ಹೆಚ್ಚಾಗಿವೆ. ಇಂತಹ ಘಟನೆಗಳು ಅನುಮಾನಕ್ಕೆೆ ದಾರಿ ಮಾಡಿಕೊಡುತ್ತವೆ ಎಂದು ಹೇಳಿದರು.

ಮೀಸಲಾತಿ ಕಲ್ಪಿಸಿರುವುದು ಸಂವಿಧಾನಬದ್ಧ:

ಎಸ್‌ಸಿ-ಎಸ್‌ಟಿ, ಒಬಿಸಿಯೊಂದಿಗೆ ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೆ ಟೆಂಡರ್‌ನಲ್ಲಿ ಮೀಸಲಾತಿ ಕಲ್ಪಿಸಿರುವುದು ಸಂವಿಧಾನಬದ್ಧವಾಗಿದೆ. ಇದನ್ನು ಧರ್ಮದ ಆಧಾರವಾಗಿ ನೀಡಿಲ್ಲ. ಹಿಂದುಳಿದ ವರ್ಗದಲ್ಲಿರುವ ಕಾರಣಕ್ಕೆ ನೀಡಲಾಗಿದೆ ಎಂದು ರಾಜ್ಯ ಸರಕಾರ ಮೀಸಲಾತಿ ಕ್ರಮವನ್ನು ಸಮರ್ಥಿಸಿಕೊಂಡರು.

ಕರ್ನಾಟಕದಲ್ಲಿ ಉತ್ತಮ ಆಡಳಿತ:

ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆೆಸ್ ಸರಕಾರವು ಉತ್ತಮವಾದ ಆಡಳಿತವನ್ನು ನೀಡುತ್ತಿದೆ. ಕಾಂಗ್ರೆೆಸ್‌ನ ತತ್ವ -ಸಿದ್ಧಾಂತಗಳಿಗೆ ಅನುಸಾರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಸವಣ್ಣನ ಕಾಯಕತತ್ವದ ಆಶಯದಂತೆ ನಡೆಯುತ್ತಿದೆ ಎಂದು ರಾಜ್ಯ ಸರಕಾರವನ್ನು ಪ್ರಶಂಶಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಲೀಗಲ್ ಸೆಲ್ ರಾಜ್ಯಾಧ್ಯಕ್ಷ ಧನಂಜಯ್ಯ, ವಕೀಲರಾದ ಚಂದ್ರ ಮೌಳಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ಎಂ.ಶಿವಣ್ಣ, ಎನ್.ಭಾಸ್ಕರ್, ವಕೀಲರಾದ ಕಾಂತರಾಜ್, ವೈದ್ಯನಾಥ್ ಉಪಸ್ಥಿತರಿದ್ದರು.

ʼಮುಡಾʼ ಬಿಜೆಪಿ ಪ್ರಯತ್ನ ವಿಫಲ: 

ಕರ್ನಾಟಕದಲ್ಲಿ ಆಡಳಿತ ಪಕ್ಷವನ್ನು ವಿರೋಧಿಸಲು ವಿಪಕ್ಷಗಳಿಗೆ ಬೇರೆ ಯಾವುದೇ ವಿಚಾರವಿರಲಿಲ್ಲ. ಅದಕ್ಕಾಗಿ ಮುಡಾ ಪ್ರಕರಣವನ್ನು ಬಿಜೆಪಿಯವರು ಎಳೆದು ತಂದರು ಎಂದು ಅಭಿಷೇಕ್ ಮನು ಸಿಂಘ್ವಿ ತಿಳಿಸಿದರು.

ಸಿದ್ದರಾಮಯ್ಯ ಅವರ 45 ವರ್ಷದ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆೆಯನ್ನು ಹೊಂದಿಲ್ಲ. ಅವರ ವಿರುದ್ದ ಒಂದೂ ಹಗರಣಗಳು ಇಲ್ಲ. ಮುಖ್ಯಮಂತ್ರಿಯಾಗಿ ಆಡಳಿತವನ್ನು ಚೆನ್ನಾಗಿ ಮಾಡುತ್ತಿದ್ದಾರೆ. ಈ ಹಿನ್ನೆೆಲೆಯಲ್ಲಿ ಬಿಜೆಪಿ ಮತ್ತು ವಿಪಕ್ಷಗಳು ಸಿಎಂ ವ್ಯಕ್ತಿತ್ವಕ್ಕೆೆ ಧಕ್ಕೆೆ ಉಂಟುಮಾಡಲು ಈ ಪ್ರಕರಣ ತಂದರು. ಆದರೆ ಅದು ವಿಫಲವಾಗಿ ಲೋಕಾಯುಕ್ತ ಕ್ಲೀನ್ ಚೀಟ್ ನೀಡಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News