ಮೈಸೂರು | ವಾಜಮಂಗಲದಲ್ಲಿ ಅಂಬೇಡ್ಕರ್ ನಾಮಫಲಕಕ್ಕೆ ಅವಮಾನ : ವಿಕೃತಿ ಮೆರೆದ ಕಿಡಿಗೇಡಿಗಳು

ಮೈಸೂರು : ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವುಳ್ಳ ನಾಮಫಲಕಕ್ಕೆ ಅವಮಾನ ಮಾಡಿ ವಿಕೃತಿ ಮೆರೆದ ಘಟನೆ ತಾಲೂಕಿನ ವಾಜಮಂಗಲದಲ್ಲಿ ನಡೆದಿದೆ.
ಡಾ.ಅಂಬೇಡ್ಕರ್ ಅವರ 134ನೇ ಜಯಂತಿ ನಿಮಿತ್ತ ಗ್ರಾಮದಲ್ಲಿ ಹಾಕಲಾಗಿದ್ದ ಹಲವು ಫ್ಲೆಕ್ಸ್ ಗಳನ್ನು ಹರಿಯಲಾಗಿದ್ದು, ಭಾವಚಿತ್ರವುಳ್ಳ ನಾಮಫಲಕಕ್ಕೆ ಮಲ ಬಳಿದು ವಿಕೃತಿ ಮೆರೆಯಲಾಗಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಶನಿವಾರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ.
ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ವಾಜಮಂಗಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಎ.14ರಂದು ಅದ್ಧೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ್ದೆವು. ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಸೌಹಾರ್ದವಾಗಿದ್ದೇವೆ. ಈ ಹೀನ ಕೃತ್ಯ ಎಸಗಿದವರು ಯಾರೆಂಬುದು ತಿಳಿಯುತ್ತಿಲ್ಲ ಎಂದು ಗ್ರಾಮದ ಯುವಕ ಪುಟ್ಟಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಬಾ ಸಾಹಬೇರ ಭಾವಚಿತ್ರವಳ್ಳ ನಾಮಫಲಕದ ಮುಂಭಾಗದಲ್ಲಿ ಮಲ ವಿಸರ್ಜಿಸಿ ಅದನ್ನೇ ಬಳಿದಿದ್ದಾರೆ. ಗ್ರಾಮದಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ಗಳನ್ನು ಹರಿದಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಹಾಲಿನ ಡೈರಿಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಎರಡು ಬೈಕಿನಲ್ಲಿ ಬಂದಿರುವ ಮೂವರು ಯುವಕರು ಈ ಕೃತ್ಯ ಎಸಗಿದ್ದಾರೆ. ಗಾಡಿಯ ನಂಬರ್ ಕಾಣಿಸುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಹೀನಕೃತ್ಯ ಎಸಗಿ ರಾಷ್ಟ್ರ ನಾಯಕನಿಗೆ ಅವಮಾನ ಮಾಡಿರುವವರನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸಿರುವ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ರಾಷ್ಟ್ರ ನಾಯಕರ ಭಾವಚಿತ್ರಕ್ಕೆ ಮಲ ಬಳಿದಿರುವುದು ದೇಶದಲ್ಲಿಯೇ ಮೊದಲಿರಬೇಕು. ಜಂಗಲ್ ರಾಜ್ಯಗಳೆಂದೇ ಹೆಸರಾದ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿಯೂ ಈ ಕೃತ್ಯ ವರದಿಯಾಗಿಲ್ಲ.
-ಹಾರೋಹಳ್ಳಿ ರವೀಂದ್ರ, ಲೇಖಕ
ರಾಷ್ಟ್ರನಾಯಕ ಡಾ.ಅಂಬೇಡ್ಕರ್ ಅವರ ಮೇಲೆ ಯಾಕಿಷ್ಟು ಅಸಹನೆ? ಈ ಹಿಂದಿನ ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದರೆ, ಈ ಪ್ರಕರಣ ನಡೆಯುತ್ತಿರಲಿಲ್ಲ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೀನ ಕೃತ್ಯ ಎಸಗಿದವರನ್ನು ಬಂಧಿಸಬೇಕು. ಇಲ್ಲದಿದ್ದರೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ.
-ಅಹಿಂದ ಜವರಪ್ಪ, ಸಾಮಾಜಿಕ ಹೋರಾಟಗಾರ

