ಕೇರಳದ ಹದಿಹರೆಯದ ಯುವತಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಈವರೆಗೆ 42 ಆರೋಪಿಗಳ ಬಂಧನ, 29 ಪ್ರಕರಣಗಳು ದಾಖಲು

Update: 2025-01-14 10:47 GMT
Photo of protest against rape

ಸಾಂದರ್ಭಿಕ ಚಿತ್ರ (PTI)

  • whatsapp icon

ತಿರುವನಂತಪುರ: 18ರ ಹರೆಯದ ದಲಿತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಈವರೆಗೆ 42 ಜನರನ್ನು ಬಂಧಿಸಿರುವ ಕೇರಳ ಪೋಲಿಸರು, ಒಟ್ಟು 29 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ತಾನು ಅಪ್ರಾಪ್ತ ವಯಸ್ಕಳಾಗಿದ್ದಾಗ ಸುಮಾರು 62 ಜನರು ತನ್ನ ಮೇಲೆ ಸರಣಿ ಲೈಂಗಿಕ ದೌರ್ಜನ್ಯಗಳನ್ನು ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

ರಾಜ್ಯದ ಪಟ್ಟಣಂತಿಟ್ಟ, ಇಳವುಂತಿಟ್ಟ, ಪಂದಳಂ ಮತ್ತು ಮಲಯಾಳಪುಳ ಪೋಲಿಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಸೋಮವಾರ ಇನ್ನೂ 14 ಜನರನ್ನು ಬಂಧಿಸಿ, ಎರಡು ಹೊಸ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇದರೊಂದಿಗೆ ಬಂಧಿತರ ಒಟ್ಟು ಸಂಖ್ಯೆ 42ಕ್ಕೇರಿದ್ದು,ಎಲ್ಲರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಗಳ ಪೈಕಿ ಓರ್ವ ವಿದೇಶದಲ್ಲಿದ್ದಾನೆ ಎಂದು ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.

ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳು ಪ್ರಮುಖವಾಗಿ ಆಕೆಯ ಸಹಪಾಠಿಗಳು, ಸ್ನೇಹಿತರು ಮತ್ತು ನೆರೆಕರೆಯ ನಿವಾಸಿಗಳಾಗಿದ್ದಾರೆ. ಅವರ ಪೈಕಿ ಕೆಲವರು ಅಪ್ರಾಪ್ತ ವಯಸ್ಕರಾಗಿದ್ದರೆ ಇತರರು 20ರಿಂದ 40 ವರ್ಷ ವಯೋಮಾನದವರಾಗಿದ್ದಾರೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಪ್ರತಿನಿಧಿಗಳು ತಿಳಿಸಿದರು.

ಪ್ರಕರಣದಲ್ಲಿಯ ಹಲವು ಆರೋಪಿಗಳು ಪಟ್ಟಣಂತಿಟ್ಟ ಖಾಸಗಿ ಬಸ್ ನಿಲ್ದಾಣದಲ್ಲಿ ಯುವತಿಯನ್ನು ಭೇಟಿಯಾಗುತ್ತಿದ್ದರು ಮತ್ತು ಆಕೆಯನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗುತ್ತಿದ್ದರು ಎಂದು ಪೋಲಿಸರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಜಿಲ್ಲಾ ಮಟ್ಟದ ಅಥ್ಲೀಟ್ ಆಗಿರುವ ಯುವತಿ ತನ್ನ ಮೇಲಿನ ಲೈಂಗಿಕ ದೌರ್ಜನ್ಯಗಳ ವಿವರಗಳನ್ನು ಕೇರಳ ಮಹಿಳಾ ಸಮಖ್ಯಾ ಸೊಸೈಟಿಯ ಸ್ವಯಂಸೇವಕರೊಂದಿಗೆ ಹಂಚಿಕೊಂಡಿದ್ದಳು. 15 ದಿನಗಳ ಹಿಂದೆ ಅವರು ಮಕ್ಕಳ ಕಲ್ಯಾಣ ಸಮಿತಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

ಡಿಐಜಿ ಅಜೀತಾ ಬೇಗಂ ಮಾರ್ಗದರ್ಶನದಲ್ಲಿ 25 ಸದಸ್ಯರ ವಿಶೇಷ ತನಿಖಾ ತಂಡವು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News