ಬಜೆಟ್ ಅಧಿವೇಶನದಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡನೆಗೆ ಸರ್ಕಾರ ಸಜ್ಜು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ PC: PTI
ಹೊಸದಿಲ್ಲಿ: ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ನೆರ ತೆರಿಗೆ ಕಾನೂನಿಗೆ ಸಂಬಂಧಿಸಿದ ಮಸೂದೆಯನ್ನು ಮಂಡಿಸುವ ನಿರೀಕ್ಷೆ ಇದೆ. ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳ ಸರಳೀಕರಣ, ಅನಗತ್ಯ ಅಂಶಗಳನ್ನು ಕಿತ್ತುಹಾಕುವುದು ಮತ್ತು ಜನಸಾಮಾನ್ಯ ಸ್ನೇಹಿ ಭಾಷೆಯನ್ನು ಅಳವಡಿಸುವುದು ಇದರ ಉದ್ದೇಶ ಎಂದು ಹೇಳಲಾಗಿದೆ.
ದೇಶದಲ್ಲಿ 63 ವರ್ಷಗಳಿಂದ ಜಾರಿಯಲ್ಲಿದ್ದ ಕಾನೂನಿನ ಬದಲು ಹೊಸ ಕಾನೂನು ಜಾರಿಗೆ ತರುವುದಾದಲ್ಲಿ, ಎರಡು ಭಾಗಗಳಲ್ಲಿ ತರಬಹುದು ಎಂಬ ನಿರ್ಧಾರಕ್ಕೆ ಕಾನೂನಿನ ಪರಿಷ್ಕರಣೆಯ ಹೊಣೆ ಹೊತ್ತಿದ್ದ ಸಮಿತಿ ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಧಿಕಾರಿಗಳ ತಂಡ ಸಿದ್ಧಪಡಿಸಿದ ಕರಡು ಕಾನೂನನ್ನು ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗಾಗಿ ಬಹಿರಂಗಪಡಿಸುವ ಸುಳಿವನ್ನು ಸರ್ಕಾರ ನೀಡಿದ್ದು, ಸಂಕೀರ್ಣ ತೆರಿಗೆ ಕಾನೂನುಗಳಿಗೆ ಅಂತ್ಯ ಹಾಡಬೇಕು ಎಂಬ ಪ್ರಬಲ ಸಂದೇಶವನ್ನು ರವಾನಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ತೆರಿಗೆ ಪಾವತಿದಾರರು ಹಾಗೂ ತಜ್ಞರ ಅಭಿಪ್ರಾಯಗಳ ಆಧಾರದಲ್ಲಿ ಹೊಸ ಕಾನೂನು ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಇದಕ್ಕಾಗಿ ಹಣಕಾಸು ಸಚಿವಾಲಯದ ಅಧಿಕಾರಿಗಳು ಹಾಗೂ ಪ್ರಧಾನಿ ಕಚೇರಿ ಅಧಿಕಾರಿಗಳು ಕಳೆದ ಆರೆಂಟು ವಾರಗಳಿಂದ ಸಿದ್ಧಪಡಿಸುತ್ತಿದ್ದು, ಬಜೆಟ್ ಮಂಡನೆ ವೇಳೆಗೆ ಇದು ಸಿದ್ಧವಾಗಲಿದೆ ಎಂದು ತಿಳಿದುಬಂದಿದೆ.
ಜುಲೈನಲ್ಲಿ ಬಜೆಟ್ ಮಂಡನೆ ವೇಳೆ ಈ ಘೋಷಣೆಯನ್ನು ಹಣಕಾಸು ಸಚಿವರು ಮಾಡಿದ್ದು, ಫೆಬ್ರುವರಿ 1ರ ಬಜೆಟ್ ಭಾಷಣದಲ್ಲಿ ಹೊಸ ಮಸೂದೆಯ ಬಗ್ಗೆ ಉಲ್ಲೇಖಿಸುವ ಸಾಧ್ಯತೆ ಇದೆ. ಆದರೆ ಈ ಮಸೂದೆಯನ್ನು ಅಧಿವೇಶನದ ಮೊದಲಾರ್ಧದಲ್ಲಿ ಮಂಡಿಸಬೇಕೇ ಅಥವಾ ಕೊನೆಯಲ್ಲಿ ಮಂಡಿಸಬೇಕೇ ಎನ್ನುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.
2010ರಲ್ಲಿ ನೇರತೆರಿಗೆ ಸಂಹಿತೆ ಮಸೂದೆಯನ್ನು ಮಂಡಿಸಿದ ಬಳಿಕ ಆದಾಯ ತೆರಿಗೆ ಕಾಯ್ದೆಯನ್ನು ಮರು ಬರೆಯುವ ಮೂರನೇ ಪ್ರಯತ್ನ ಇದಾಗಿದೆ.