ಭಾರತಕ್ಕೆ ಭೇಟಿ ನೀಡುವಂತೆ ಸುನೀತಾ ವಿಲಿಯಮ್ಸ್‌ಗೆ ಪತ್ರ ಬರೆದ ಪ್ರಧಾನಿ ಮೋದಿ

Update: 2025-03-18 23:07 IST
ಭಾರತಕ್ಕೆ ಭೇಟಿ ನೀಡುವಂತೆ ಸುನೀತಾ ವಿಲಿಯಮ್ಸ್‌ಗೆ ಪತ್ರ ಬರೆದ ಪ್ರಧಾನಿ ಮೋದಿ

File image

  • whatsapp icon

ಹೊಸದಿಲ್ಲಿ: ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಂಭತ್ತು ತಿಂಗಳಿಗೂ ಹೆಚ್ಚು ಕಾಲ ಸಿಕ್ಕಿಹಾಕಿಕೊಂಡು ಬುಧವಾರ ಮುಂಜಾನೆ ವೇಳೆಗೆ ಭೂಮಿಗೆ ಮರಳಲಿರುವ ನಾಸಾ ಗಗನಯಾನಿ ಭಾರತ ಮೂಲದ ಸುನೀತಾ ವಿಲಿಯಮ್ಸ್‌ರನ್ನು ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಆಹ್ವಾನಿಸಿದ್ದಾರೆ.

‘‘ನೀವು ಸಾವಿರಾರು ಮೈಲಿ ದೂರದಲ್ಲಿದ್ದರೂ, ನೀವು ನಮ್ಮ ಹೃದಯಕ್ಕೆ ಸಮೀಪದಲ್ಲಿ ನಿರಂತರವಾಗಿ ವಾಸಿಸುತ್ತಿದ್ದೀರಿ. ನಿಮ್ಮ ಉತ್ತಮ ಆರೋಗ್ಯ ಮತ್ತು ನಿಮ್ಮ ಕಾರ್ಯದಲ್ಲಿ ಯಶಸ್ಸಿಗಾಗಿ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ’’ ಎಂಬುದಾಗಿ ಹೃದಯಸ್ಪರ್ಶಿ ಪತ್ರದಲ್ಲಿ ಮೋದಿ ಬರೆದಿದ್ದಾರೆ. ಈ ಪತ್ರವನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.

‘‘ನಿಮ್ಮ ಮರಳುವಿಕೆಯನ್ನು ಮಿಸ್ ಬೋನೀ ಪಾಂಡ್ಯ ಕಾತರದಿಂದ ಎದುರು ನೋಡುತ್ತಿರಬೇಕು. ದಿವಂಗತ ದೀಪಕ್ ಭಾಯಿ ಅವರ ಆಶೀರ್ವಾದವೂ ನಿಮ್ಮ ಮೇಲೆ ಇದೆ ಎನ್ನುವುದು ನನಗೆ ಗೊತ್ತಿದೆ. 2016ರಲ್ಲಿ ನಾನು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ನಿಮ್ಮ ಜೊತೆ ಅವರನ್ನು ಭೇಟಿಯಾಗಿರುವುದನ್ನು ನಾನೀಗ ಸ್ಮರಿಸಿಕೊಳ್ಳುತ್ತಿದ್ದೇನೆ. ನೀವು ಭೂಮಿಗೆ ಮರಳಿದ ಬಳಿಕ, ಭಾರತದಲ್ಲಿ ನಿಮ್ಮನ್ನು ನೋಡುವುದನ್ನು ನಾವು ಎದುರು ನೋಡುತ್ತಿದ್ದೇವೆ. ಭಾರತದ ಅತ್ಯಂತ ಖ್ಯಾತಿವೆತ್ತ ಪುತ್ರಿಯರ ಪೈಕಿ ಒಬ್ಬರಾಗಿರುವ ನಿಮ್ಮನ್ನು ಭಾರತದಲ್ಲಿ ನೋಡುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯ’’ ಎಂದು ಮೋದಿ ತನ್ನ ಪತ್ರದಲ್ಲಿ ಬರೆದಿದ್ದಾರೆ.

ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ಇತರ ಇಬ್ಬರು ಗಗನಯಾನಿಗಳನ್ನು ಒಳಗೊಂಡ ಡ್ರ್ಯಾಗನ್ ಕ್ಯಾಪ್ಸೂಲ್ ನ್ಯೂಯಾರ್ಕ್ ಸಮಯ ಮಂಗಳವಾರ ಮುಂಜಾನೆ 1:05 (ಭಾರತೀಯ ಸಮಯ ಬೆಳಗ್ಗೆ 10:35)ಕ್ಕೆ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಿಂದ ಬಿಡುಗಡೆಗೊಂಡಿದೆ.

ಈ ಕ್ಯಾಪ್ಸೂಲ್ ಬಾಹ್ಯಾಕಾಶದ ಮೂಲಕ ಪ್ರಯಾಣಿಸಲಿದೆ. ಬಳಿಕ ಅದು ಭೂಮಿಯ ವಾತಾವರಣವನ್ನು ಪ್ರವೇಶಿಸಿ ಪ್ಯಾರಾಶೂಟ್‌ಗಳ ನೆರವಿನಿಂದ ಭೂಮಿಗೆ ಇಳಿಯಲಿದೆ. ಅಂತಿಮವಾಗಿ ಫ್ಲೋರಿಡ ಸಮಯ ಮಂಗಳವಾರ ಸಂಜೆ 6 ಗಂಟೆ (ಭಾರತೀಯ ಕಾಲಮಾನ ಬುಧವಾರ ಮುಂಜಾನೆ 3:30)ಯ ಸುಮಾರಿಗೆ ಫ್ಲೋರಿಡ ಕರಾವಳಿಯಲ್ಲಿ ಸಮುದ್ರವನ್ನು ಸ್ಪರ್ಶಿಸುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News