ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮನೆಯಲ್ಲಿ ಕಂತೆ ಕಂತೆ ನೋಟು; ಪತ್ತೆಯಾಗಿದ್ದು ಹೇಗೆ ಗೊತ್ತೇ?

PC: x.com/aoiventures
ಹೊಸದಿಲ್ಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಅಧಿಕೃತ ನಿವಾಸದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ವೇಳೆ ಭಾರಿ ಪ್ರಮಾಣದ ನೋಟಿನ ಕಂತೆಗಳು ಪತ್ತೆಯಾಗಿವೆ. ಇದು ನ್ಯಾಯಾಂಗ ವಲಯದಲ್ಲಿ ಭಾರಿ ಆತಂಕದ ಅಲೆ ಸೃಷ್ಟಿಸಿದೆ.
ಇದೀಗ ಇವರನ್ನು ಬೇರೆ ಹೈಕೋರ್ಟ್ ಗೆ ವರ್ಗಾಯಿಸುವ ಬಗ್ಗೆ ನಿರ್ಧರಿಸುವುದು ಸಿಜೆಐ ಸಂಜೀವ್ ಖನ್ನ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂಗೆ ಅನಿವಾರ್ಯವಾಯಿತು.
ಬೆಂಕಿ ಅವಘಡ ಸಂಭವಿಸಿದಾಗ ನ್ಯಾಯಮೂರ್ತಿ ಯಶವಂತ ವರ್ಮಾ ನಗರದಲ್ಲಿ ಇರಲಿಲ್ಲ. ಅವರ ಕುಟುಂಬ ಸದಸ್ಯರು ಅಗ್ನಿಶಾಮಕ ಠಾಣೆ ಮತ್ತು ಪೊಲೀಸರಿಗೆ ಕರೆ ಮಾಡಿದರು. ಬೆಂಕಿ ನಂದಿಸಿದ ಬಳಿಕ, ಕೊಠಡಿಯೊಂದರಲ್ಲಿ ಭಾರಿ ಪ್ರಮಾಣದ ನಗದು ಇರುವುದು ಪತ್ತೆಯಾಯಿತು. ತಕ್ಷಣ ಈ ಲೆಕ್ಕಪತ್ರ ಇಲ್ಲದ್ದು ಎನ್ನಲಾದ ಹಣವನ್ನು ವಶಪಡಿಸಿಕೊಳ್ಳುವ ಸಂಬಂಧ ಅಧಿಕೃತ ಪ್ರಕ್ರಿಯೆ ಆರಂಭಿಸಲಾಯಿತು.
ಈ ಆಕಸ್ಮಿಕ ನಗದು ಪತ್ತೆ ಸಂಬಂಧ ಸ್ಥಳೀಯ ಪೊಲೀಸರು ತಮ್ಮ ಹಿರಿಯರಿಗೆ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಲ್ಲಿಂದ ಮಾಹಿತಿ ಸಿಜೆಐಯವರಿಗೆ ತಲುಪಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಖನ್ನಾ, ತಕ್ಷಣ ಕೊಲಿಜಿಯಂ ಸಭೆ ಕರೆದರು. ವರ್ಮಾ ಅವರನ್ನು ತಕ್ಷಣ ವರ್ಗಾವಣೆ ಮಾಡುವ ಒಮ್ಮತದ ನಿರ್ಧಾರವನ್ನು ಕೊಲಿಜಿಯಂ ಕೈಗೊಂಡಿತು. ಅವರನ್ನು ತಕ್ಷಣದಿಂದ ಜಾರಿಯಾಗುವಂತೆ ಅಲಹಾಬಾದ್ ಹೈಕೋರ್ಟ್ ಗೆ ವರ್ಗಾಯಿಸಲಾಗಿದೆ. 2021ರ ಅಕ್ಟೋಬರ್ ನಲ್ಲಿ ಅವರನ್ನು ಅಲಹಾಬಾದ್ ನಿಂದ ದೆಹಲಿಗೆ ವರ್ಗಾಯಿಸಲಾಗಿತ್ತು.
ಈ ಪ್ರಕರಣ ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತರುವಂಥದ್ದಾಗಿದ್ದು, ತಕ್ಷಣ ನ್ಯಾಯಮೂರ್ತಿ ವರ್ಮಾ ಅವರ ರಾಜೀನಾಮೆಗೆ ಸೂಚಿಸಲಾಗುವುದು. ಇದಕ್ಕೆ ನಿರಾಕರಿಸಿದರೆ, ಇಲಾಖಾ ವಿಚಾರಣೆ ಆರಂಭಿಸಿ, ಸಂಸತ್ತಿನಲ್ಲಿ ಅವರ ವಜಾ ನಿರ್ಧಾರ ಕೈಗೊಳ್ಳಲು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಐವರು ಸದಸ್ಯರ ಕೊಲಿಜಿಯಂ ಸ್ಪಷ್ಟಪಡಿಸಿದೆ.