ಕಾಂಗ್ರೆಸ್ ಹಾಗೂ ಬಿ ಆರ್ ಎಸ್ ಅನ್ನು ಒಟ್ಟುಗೂಡಿಸಿದ ಕ್ಷೇತ್ರ ಪುನರ್ವಿಂಗಡಣೆ ವಿರುದ್ಧದ ಹೋರಾಟ

PC : PTI
ಹೈದರಾಬಾದ್: ಶನಿವಾರ ಕ್ಷೇತ್ರ ಪುನರ್ವಿಂಗಣೆ ಕುರಿತು ಚರ್ಚಿಸಲು ಚೆನ್ನೈನಲ್ಲಿ ಆಯೋಜನೆಗೊಂಡಿದ್ದ ಸಭೆಯಿಂದ ಆಂಧ್ರ ಪ್ರದೇಶದ ಪಕ್ಷಗಳು ಹೊರಗುಳಿದರೆ, ತೆಲಂಗಾಣದಲ್ಲಿ ಪ್ರತಿಸ್ಪರ್ಧಿಗಳಾದ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷವಾದ ಬಿ ಆರ್ ಎಸ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿವೆ.
ತೆಲಂಗಾಣದಲ್ಲಿ ನೆಲೆ ಕಂಡುಕೊಳ್ಳಲು ಹವಣಿಸುತ್ತಿರುವ ಬಿಜೆಪಿ ಈ ಬೆಳವಣಿಗೆಯ ಕುರಿತು ತಕ್ಷಣವೇ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಬಿ ಆರ್ ಎಸ್ ಪಕ್ಷವೇನಾದರೂ ಇಂಡಿಯಾ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದೆಯೆ ಹಾಗೂ ಎರಡೂ ಪಕ್ಷಗಳ ನಡುವೆ ಗುಪ್ತ ಒಪ್ಪಂದವೇನಾದರೂ ಆಗಿದೆಯೆ ಎಂದು ಪ್ರಶ್ನಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ನಿಝಾಮಾಬಾದ್ ನ ಬಿಜೆಪಿ ಸಂಸದ ಧರ್ಮಾಪುರಿ ಅರವಿಂದ್, “ಚೆನ್ನೈ ಸಭೆಯಲ್ಲಿ ಬಿ ಆರ್ ಎಸ್ ಏಕೆ ಪಾಲ್ಗೊಂಡಿತ್ತು? ಅದೇನಾದರೂ ಇಂಡಿಯಾ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದೆಯೆ?” ಎಂದು ಪ್ರಶ್ನಿಸಿದ್ದಾರೆ.
“ಇದೀಗ ಕಾಂಗ್ರೆಸ್ ಹಾಗೂ ಬಿ ಆರ್ ಎಸ್ ಗಳೆರಡೂ ಒಂದೇ ಎಂಬುದು ಸಾಬೀತಾಗಿದೆ. ಕಾಂಗ್ರೆಸ್ ಪಕ್ಷವು ಕೆಸಿಆರ್ ಕುಟುಂಬವನ್ನು ಭ್ರಷ್ಟಾಚಾರದ ಆರೋಪಗಳಿಂದ ರಕ್ಷಿಸಲು ಯತ್ನಿಸುತ್ತಿದೆ. ಬಿ ಆರ್ ಎಸ್ ಪಕ್ಷವು ಆರು ಗ್ಯಾರಂಟಿ ಯೋಜನೆಗಳಿಗಾಗಿ ಹೋರಾಟ ನಡೆಸುವ ಬದಲು, ಕಾಂಗ್ರೆಸ್ ನೊಂದಿಗೆ ಗುಪ್ತ ಒಪ್ಪಂದ ಮಾಡಿಕೊಂಡಿದೆ. ಎರಡೂ ಪಕ್ಷಗಳೂ ಚೆನ್ನೈನಲ್ಲಿ ಒಗ್ಗಟ್ಟಾಗಿವೆ. ಮದ್ಯ ಮಾಫಿಯಾಗಳು ಒಗ್ಗೂಡಿವೆ. ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವೇ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ, ನಾವು ಬಡವರಿಗೆ ಉಚಿತ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆಯನ್ನು ಒದಗಿಸುತ್ತೇವೆ. ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಹೆಜ್ಜೆ ಗುರುತು ಮೂಡಿಸುವ ಕೆಸಿಆರ್ ಕನಸು ಅಂತ್ಯಗೊಂಡಿದೆ. ಒಂದು ಕಾಲದಲ್ಲಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವ ಕುರಿತು ಜಂಭ ಕೊಚ್ಚಿಕೊಳ್ಳುತ್ತಿದ್ದ ಕೆಸಿಆರ್, ಇದೀಗ ತಮ್ಮ ತೋಟದಲ್ಲಿ ಹುಲ್ಲು ಕೆತ್ತುತ್ತಿದ್ದಾರೆ” ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಈ ನಡುವೆ, ಡಿಎಂಕೆ ಪಕ್ಷದಿಂದ ಸಭೆಯ ಆಹ್ವಾನ ಸ್ವೀಕರಿಸಿದರೂ, ಆಂಧ್ರಪ್ರದೇಶದ ವಿರೋಧ ಪಕ್ಷವಾದ ವೈ ಎಸ್ ಆರ್ ಸಿ ಪಿ ಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದೆ.
ಬದಲಿಗೆ, 2026ಕ್ಕೆ ನಿಗದಿಯಾಗಿರುವ ಕ್ಷೇತ್ರ ಪುನರ್ವಿಂಗಡಣೆ ತಯಾರಿಯ ಕುರಿತು ಕಳವಳ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈ ಎಸ್ ಆರ್ ಸಿ ಪಿ ಪಕ್ಷದ ಮುಖ್ಯ ಸ್ಥ ವೈ.ಎಸ್.ಜಗನ್ ಮೋಹನ್ ರೆಡ್ಡಿ ಪತ್ರ ಬರೆದಿದ್ದಾರೆ. ಎನ್ ಡಿ ಎ ಮೈತ್ರಿಕೂಟದ ಅಂಗಪಕ್ಷಗಳಾಗಿರುವುದರಿಂದ ತೆಲುಗು ದೇಶಂ ಪಕ್ಷ ಹಾಗೂ ಜನಸೇನಾ ಪಕ್ಷಗಳೆರಡೂ ಸಭೆಯಿಂದ ಹೊರಗುಳಿದಿವೆ.