ಕರ್ನಾಟಕದ ಮೇಕೆದಾಟು ಯೋಜನೆಗೆ ತಡೆಯೊಡ್ಡಲು ಮುಂದಾದ ತಮಿಳುನಾಡು

ದುರೈ ಮುರುಗನ್ | credit: X/katpadidmk
ಚೆನ್ನೈ: ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರದಿಂದ ಅನುಮತಿ ಪಡೆಯಲು ಕರ್ನಾಟಕ ತುದಿಗಾಲಲ್ಲಿ ನಿಂತಿರುವಾಗಲೇ, ಕರ್ನಾಟಕವು ಕಾವೇರಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಲು ಅವಕಾಶ ನೀಡುವುದಿಲ್ಲ ಹಾಗೂ ಈ ಸಂಬಂಧ ಕಾನೂನು ಕ್ರಮ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸೋಮವಾರ ತಮಿಳುನಾಡು ಘೋಷಿಸಿದೆ.
ತಮಿಳುನಾಡು ವಿಧಾನಸಭೆಯಲ್ಲಿ 2025-26ನೇ ಸಾಲಿನ ನೀತಿ ನಿರೂಪಣೆ ಟಿಪ್ಪಣಿಯನ್ನು ಮಂಡಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವ ದುರೈ ಮುರುಗನ್, ಕರ್ನಾಟಕ ಸರಕಾರ ಇದುವರೆಗೆ ಅಂತಿಮಗೊಂಡ ವಿಸ್ತೃತ ಯೋಜನಾ ವರದಿಯನ್ನು ತನಗೆ ಸಲ್ಲಿಸಿಲ್ಲ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ ಎಂದು ತಿಳಿಸಿದರು.
“ಕಾವೇರಿ ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟ್ ಅಂತಿಮ ಆದೇಶವನ್ನು ಉಲ್ಲಂಘಿಸಿ ಕರ್ನಾಟಕ ರಾಜ್ಯವು ಕಾವೇರಿ ನದಿ ಪಾತ್ರದ ಮೇಕೆದಾಟು ಅಥವಾ ಬೇರೆ ಇನ್ನಾವುದೇ ಸ್ಥಳದಲ್ಲಿ ಅಣೆಕಟ್ಟು ನಿರ್ಮಿಸುವುದನ್ನು ತಡೆಯಲು ಹಾಗೂ ತಮಿಳುನಾಡಿನ ಹಕ್ಕನ್ನು ರಕ್ಷಿಸಲು ಕಾನೂನು ಕ್ರಮ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ತಮಿಳುನಾಡು ಸರಕಾರ ಕೈಗೊಳ್ಳು ತ್ತಿದೆ” ಎಂದು ದುರೈ ಮುಗುರನ್ ಹೇಳಿದರು.
ಮೇಕೆದಾಟು ಯೋಜನೆಗೆ ಆದ್ಯತೆಯ ಮೇರೆಗೆ ಅನುಮತಿ ನೀಡಬೇಕು ಎಂದು ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಉಪ ಮುಖ್ಯನಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಿದ ಒಂದು ತಿಂಗಳ ನಂತರ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ 67.16 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸುವ ಪ್ರಸ್ತಾವವನ್ನು ಕೇಂದ್ರ ಸರಕಾರಕ್ಕೆ ಕರ್ನಾಟಕ ಸರಕಾರ ಸಲ್ಲಿಸಿದೆ. ಆದರೆ, ನದಿ ಪಾತ್ರದ ಕೆಳಭಾಗದ ರಾಜ್ಯವಾದ ತನ್ನ ಅನುಮತಿ ಇಲ್ಲದೆ ಕರ್ನಾಟಕವು ಈ ಯೋಜನೆಯೊಂದಿಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ತಮಿಳುನಾಡು ವಾದಿಸುತ್ತಿದೆ.
ಅಲ್ಲದೆ, ಮೇಕೆದಾಟು ಯೋಜನೆಯಿಂದಾಗಿ ಕರ್ನಾಟಕದಿಂದ ನೀರಿನ ನೈಸರ್ಗಿಕ ಹರಿಯುವಿಕೆಗೆ ಅಡ್ಡಿಯಾಗಲಿದೆ ಎಂದೂ ತಮಿಳುನಾಡು ವಾದಿಸುತ್ತಿದೆ. ಹೀಗಾಗಿ, ಈ ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಎರಡೂ ರಾಜ್ಯಗಳು ಕಾನೂನು ಸಮರದಲ್ಲಿ ತೊಡಗಿವೆ.
ಸೌಜನ್ಯ : deccanherald.com