ಪುತ್ರಿಯ ಮೇಲೆ ಕಣ್ಣಿಡಲು ತಮ್ಮ ಪೊಲೀಸ್ ಹುದ್ದೆಯ ಪ್ರಭಾವ ಬಳಸಿಕೊಂಡಿದ್ದರೇ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ?

ಕಿರಣ್ ಬೇಡಿ | PC : PTI
ಹೊಸದಿಲ್ಲಿ: 1972ರಲ್ಲಿ ಐಪಿಎಸ್ ಸೇವೆಗೆ ಸೇರ್ಪಡೆಗೊಂಡ ಪ್ರಪ್ರಥಮ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಹೊಂದಿರುವ ಹಾಗೂ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಮಾಜಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರದ್ದು ವರ್ಣರಂಜಿತ ವೃತ್ತಿ ಬದುಕು. ಅವರು ತಿಹಾರ್ ಜೈಲಿನ ಅಧೀಕ್ಷಕರಾಗಿದ್ದಾಗ ಜಾರಿಗೊಳಿಸಿದ್ದ ಹಲವು ಸುಧಾರಣೆಗಳು ಆ ಕಾಲಕ್ಕೆ ಮನೆಮಾತಾಗಿದ್ದವು. ನಂತರ, ಅವರ ಸಾಧನೆಗೆ ಗರಿ ಸಿಕ್ಕಿಸಿದಂತೆ ವಿಶ್ವ ಸಂಸ್ಥೆಯ ಶಾಂತಿಪಾಲನಾ ಇಲಾಖೆಯ ನಾಗರಿಕ ಪೊಲೀಸ್ ಸಲಹೆಗಾರ್ತಿಯಾಗಿ ನೇಮಕಗೊಂಡಿದ್ದರು. ಈ ಹುದ್ದೆಗೆ ಈ ಹಿಂದೆಂದೂ ಭಾರತೀಯ ಮಹಿಳೆಯೊಬ್ಬರು ಏರಿರಲಿಲ್ಲ. ತಮ್ಮ ಮೂರು ದಶಕಗಳ ಪೊಲೀಸ್ ವೃತ್ತಿ ಜೀವನದಲ್ಲಿ ದಿಟ್ಟ ಪೊಲೀಸ್ ಅಧಿಕಾರಿಯೆಂದೇ ಹೆಸರಾಗಿದ್ದ ಕಿರಣ್ ಬೇಡಿ, ಇದೀಗ ತಮ್ಮ ಖಾಸಗಿ ವಿಷಯಕ್ಕಾಗಿ ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪಕ್ಕೆ ಗುರಿಯಾಗಿದ್ದಾರೆ.
2003ರ ಸುಮಾರಿಗೆ ಬಾಲಿವುಡ್ ನಟಿ ಸಿಮಿ ಗರೆವಾಲ್ ರೊಂದಿಗೆ ಟಾಕ್ ಶೋನಲ್ಲಿ ಪಾಲ್ಗೊಂಡಿದ್ದ ಆಗ 20 ವರ್ಷ ವಯಸ್ಸಿನವರಾಗಿದ್ದ ಕಿರಣ್ ಬೇಡಿ ಅವರ ಪುತ್ರಿ ಸೈನಾ, ತಮ್ಮ ತಾಯಿಯ ವೃತ್ತಿ ಜೀವನ ಹಾಗೂ ತಮ್ಮಿಬ್ಬರ ನಡುವೆ ಇರುವ ಪರಸ್ಪರ ಪ್ರೀತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.
ಆದರೆ, ಸಿಮಿ ಗರೆವಾಲ್ ಟಾಕ್ ಶೋನಲ್ಲಿ ಸೈನಾ ಅವರು ತಮ್ಮ ತಾಯಿ ಕಿರಣ್ ಬೇಡಿ ಬಗ್ಗೆ ಹೇಳಿಕೊಂಡಿದ್ದಕ್ಕಿಂತ, ಅವರ ಖಾಸಗಿ ಬದುಕಿನ ಸಂಬಂಧ ಭಿನ್ನವಾಗಿತ್ತು. ಸೈನಾ ಅವರು ವಿವಾಹಿತ ಹೋಟೆಲ್ ಉದ್ಯಮಿಯಾದ ಗೋಪಿ ಸೂರಿಯೊಂದಿಗೆ ಸಂಬಂಧ ಹೊಂದಿರುವುದು, ಆತನೊಂದಿಗೆ ಅನುಮಾನಾಸ್ಪದ ವೀಸಾ ವ್ಯವಹಾರ ನಡೆಸುತ್ತಿರುವುದು ಹಾಗೂ ಆ ವೀಸಾ ವ್ಯವಹಾರಕ್ಕಾಗಿ ಪದೇ ಪದೇ ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಕಿರಣ್ ಬೇಡಿ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
2003ರಲ್ಲಿ ಅವರು ವಿಶ್ವ ಸಂಸ್ಥೆಯ ಶಾಂತಿಪಾಲನಾ ಇಲಾಖೆಯ ನಾಗರಿಕ ಪೊಲೀಸ್ ಸಲಹೆಗಾರ್ತಿಯಾಗಿ ನೇಮಕಗೊಂಡ ನಂತರ, ತಮ್ಮ ಪುತ್ರಿಯ ನಡವಳಿಕೆಗಳ ಬಗ್ಗೆ ಅತೃಪ್ತಿ ಹೊಂದಿದ್ದ ಅವರು, ತಮ್ಮ ಕೆಲವು ಆಪ್ತ ಪೊಲೀಸ್ ಅಧಿಕಾರಿಗಳು ಹಾಗೂ ದಿಲ್ಲಿ ಪೊಲೀಸ್ ಸಿಬ್ಬಂದಿಗಳ ನೆರವಿನೊಂದಿಗೆ ತಮ್ಮ ಪುತ್ರಿಯ ಮೇಲೆ ಹದ್ದಿನ ಕಣ್ಣಿಟ್ಟಿದ್ದರು ಎಂಬ ಸಂಗತಿ ಇದೀಗ ಕಿರಣ್ ಬೇಡಿಯವರ ಸುಮಾರು 30 ಗಂಟೆಗಳ ಟೇಪ್ ನಿಂದ ಬಯಲಾಗಿದೆ ಎಂದು The News Minute ಹಾಗೂ News Laundry ಸುದ್ದಿ ಸಂಸ್ಥೆಗಳು ಜಂಟಿಯಾಗಿ ವರದಿ ಮಾಡಿವೆ.
ನಿಮ್ಮ ತಾಯಿಯಿಂದ ನೀವು ಅನುವಂಶಿಕವಾಗಿ ಏನನ್ನು ಪಡೆದಿದ್ದೀರಿ ಎಂದು ಸಿಮಿ ಗರೆವಾಲ್ ಟಾಕ್ ಶೋನಲ್ಲಿ ಕೇಳಲಾಗಿದ್ದ ಪ್ರಶ್ನೆಗೆ, ‘ವಿಶ್ವಾಸಾರ್ಹತೆ’ ಎಂದು ಸೈನಾ ಉತ್ತರಿಸಿದ್ದರು. ಆದರೆ, ಹಿನ್ನೆಲೆಯಲ್ಲಿ ವಾಸ್ತವವೇ ಬೇರೆಯಾಗಿತ್ತು. ಇದಕ್ಕೂ ಮುನ್ನ, ‘ನಾನು ಕಾಳಜಿ ಇರುವ ತಾಯಿಯಾಗಿದ್ದೇನೆ” ಎಂದು ಅದೇ ಟಾಕ್ ಶೋನಲ್ಲಿ ಕಿರಣ್ ಬೇಡಿ ಕೂಡಾ ಹೇಳಿಕೊಂಡಿದ್ದರು. ಆದರೆ, ಈ ಮಾತು ಕಿರಣ್ ಬೇಡಿ ಹಾಗೂ ಅವರ ಪುತ್ರಿ ಸೈನಾರ ಖಾಸಗಿ ಜೀವನದಲ್ಲಿ ಯಥಾವತ್ತಾಗಿ ಅನ್ವಯವಾಗಿರಲಿಲ್ಲ ಎಂಬುದು ಇದೀಗ ಬಹಿರಂಗಗೊಂಡಿರುವ ಕಿರಣ್ ಬೇಡಿಯ ಟೇಪ್ ನಿಂದ ಬೆಳಕಿಗೆ ಬಂದಿದೆ.
ಕಿರಣ್ ಬೇಡಿಯವರ ಬಯಲಾಗಿರುವ ಇಮೇಲ್ ಗಳ ಪ್ರಕಾರ, ಅವರ ಪುತ್ರಿ ಸೈನಾ, ಕೇಂದ್ರ ದಿಲ್ಲಿಯಲ್ಲಿರುವ ವಿವಾಹಿತ ಹೋಟೆಲ್ ಉದ್ಯಮಿ ಗೋಪಾಲ್ ಸುರೇಶ್ ರೊಂದಿಗೆ ಸಂಬಂಧ ಹೊಂದಿದ್ದರು. ಅಂತಾರಾಷ್ಟ್ರೀಯ ವೀಸಾದ ಅಗತ್ಯವಿರುವ ಜನರನ್ನು ಒಳಗೊಂಡ ಅನುಮಾನಾಸ್ಪದ ಹಣ ಮಾಡುವ ಯೋಜನೆಯಲ್ಲಿ ಅವರು ಭಾಗಿಯಾಗಿದ್ದರು. ಅದಕ್ಕಾಗಿ ಅವರು ಕಿರಣ್ ಬೇಡಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.
ತಮ್ಮ ಪುತ್ರಿ ಸೈನಾರ ಈ ವ್ಯವಹಾರಗಳ ಬಗ್ಗೆ ಅರಿವಿದ್ದ ಕಿರಣ್ ಬೇಡಿ, ಆಕೆಯ ವ್ಯವಹಾರಕ್ಕೆ ತಮ್ಮ ಸಮ್ಮತಿ ನೀಡಿರಲಿಲ್ಲ ಎನ್ನಲಾಗಿದೆ. ತಮ್ಮ ಒಂದು ಇಮೇಲ್ ನಲ್ಲಿ ಗೋಪಾಲ್ ಗೆ ಸೂರಿಯ ವ್ಯವಹಾರಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸಿರುವ ತಮ್ಮ ಪುತ್ರಿಯ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಿರಣ್ ಬೇಡಿ, ಗೋಪಾಲ್ ಸೂರಿಯ ವ್ಯವಹಾರವನ್ನು ‘ಮಾನವ ಕಳ್ಳಸಾಗಣೆ’ ಎಂದೂ ತಮ್ಮ ಇಮೇಲ್ ನಲ್ಲಿ ಬಣ್ಣಿಸಿದ್ದಾರೆ. ಒಂದು ವೇಳೆ ಈ ವಿಚಾರದಲ್ಲಿ ತಮ್ಮ ಪುತ್ರಿ ಸೈನಾರನ್ನು ತನಿಖೆಗೊಳಪಡಿಸಿದರೆ, ತನ್ನ ಸಾರ್ವಜನಿಕ ವರ್ಚಸ್ಸಿಗೆ ಸರಿಪಡಿಸಲಾಗದಂಥ ಹಾನಿಯಾಗುವುದರ ಕುರಿತು ಅವರು ಆತಂಕಗೊಂಡಿರುವುದೂ ಆ ಇಮೇಲ್ ಗಳಲ್ಲಿ ವ್ಯಕ್ತವಾಗಿದೆ.
ಒಂದು ಕಡೆ, ಹತಾಶ ತಾಯಿಯಂತೆ ತಮ್ಮ ಪುತ್ರಿಯ ನಡವಳಿಕೆಯನ್ನು ಬದಲಿಸಲು ಮುಂದಾಗಿರುವ ಕಿರಣ್ ಬೇಡಿ, ಅದಕ್ಕಾಗಿ ತಮಗೆ ನಿಕಟವಾಗಿದ್ದ ವ್ಯಕ್ತಿಗಳಿಂದ ಆಕೆಗೆ ತಿಳಿ ಹೇಳಿಸಿದ್ದರೆ, ಮತ್ತೊಂದು ಕಡೆ, ಓರ್ವ ಪೊಲೀಸ್ ಅಧಿಕಾರಿಯಾಗಿಯೂ ವರ್ತಿಸಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಅವರು ತಮ್ಮನ್ನು ತಾವು ಭ್ರಷ್ಟಾಚಾರರಹಿತ ಪೊಲೀಸ್ ಅಧಿಕಾರಿ ಎಂದೇ ಬಿಂಬಿಸಿಕೊಂಡಿದ್ದರೂ, ತಮ್ಮ ಖಾಸಗಿ ಬದುಕಿನ ವಿಚಾರದಲ್ಲಿ ವ್ಯವಸ್ಥೆಯನ್ನು ತಮ್ಮ ಇಚ್ಛೆಗೆ ತಕ್ಕಂತೆ ಬಗ್ಗಿಸಿಕೊಂಡ ಶಕ್ತಿಶಾಲಿ ವ್ಯಕ್ತಿಯಂತೆಯೂ ವರ್ತಿಸಿರುವುದು ಬೆಳಕಿಗೆ ಬಂದಿದೆ.
ವಿಶ್ವ ಸಂಸ್ಥೆಯ ಹುದ್ದೆಯನ್ನು ನಿರ್ವಹಿಸಲು ಅಮೆರಿಕಕ್ಕೆ ತೆರಳಿದ್ದ ಕಿರಣ್ ಬೇಡಿ, ಅಲ್ಲಿಂದಲೇ ದಿಲ್ಲಿಯಲ್ಲಿದ್ದ ತಮ್ಮ ಪುತ್ರಿಯ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ತಮ್ಮ ಸ್ನೇಹಿತರು ಹಾಗೂ ಪೊಲೀಸ್ ಸಹೋದ್ಯೋಗಿಗಳ ನೆರವನ್ನು ಪಡೆದಿದ್ದಾರೆ. ಗೋಪಾಲ್ ಸೂರಿ ಹಾಗೂ ಸೈನಾರ ವಂಚನೆಯ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಕ್ರಮವನ್ನೂ ಕಿರಣ್ ಬೇಡಿ ತೆಗೆದುಕೊಂಡಿರುವುದು ಅವರು ಹಾಗೂ ಮೇಲಿನ ವ್ಯಕ್ತಿಗಳ ನಡುವೆ ವಿನಿಮಯವಾಗಿರುವ ಕೆಲವು ಇಮೇಲ್ ಗಳಿಂದ ತಿಳಿದು ಬಂದಿದೆ. ಇದಲ್ಲದೆ, ಸೈನಾ ಹಾಗೂ ಗೋಪಾಲ್ ಸೂರಿ ದಂಪತಿಗಳ ಮೇಲೆ ಆಕ್ರಮಣಕಾರಿ ನಿಗಾವಣೆ ಇಡಲು ದಿಲ್ಲಿ ಪೊಲೀಸರೊಂದಿಗೆ ಅವರು ತಮ್ಮ ಅಧಿಕೃತ ಸಂಪರ್ಕಗಳನ್ನೂ ಬಳಸಿರುವುದು ಬಯಲಾಗಿದೆ.
ಈ ನಿಗಾವಣೆ ಕಾರ್ಯಾಚರಣೆಯಲ್ಲಿ ಹಲವು ದಿಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದು, ಈ ಪೈಕಿ ಸಹಾಯಕ ಪೊಲೀಸ್ ಆಯುಕ್ತರಾಗಿ ನಿವೃತ್ತರಾಗಿದ್ದ ವೇದ್ ಭೂಷಣ್, ಆಗ ಸಹಾಯಕ ಪೊಲೀಸ್ ಆಯಕ್ತರಾಗಿದ್ದ ರಾಜಿಂದರ್ ಸಿಂಗ್ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿವೆ. ಇದಲ್ಲದೆ, ತಮ್ಮ ಪುತ್ರಿ ಸೈನಾ ಹಾಗೂ ಆಕೆಯ ಸಂಗಾತಿ ಗೋಪಾಲ್ ಸೂರಿಯ ಚಲನವಲನಗಳ ಮೇಲೆ ನಿಗಾ ಇಡಲು ಖಾಸಗಿ ಪತ್ತೆದಾರರೊಬ್ಬರನ್ನೂ ಸುಮಾರು 20 ದಿನಗಳ ಕಾಲ ಬಳಸಿಕೊಂಡಿರುವುದು ಕಿರಣ್ ಬೇಡಿಯ ಇಮೇಲ್ ಗಳಿಂದ ಬಯಲಾಗಿದೆ.
ದಕ್ಷ ಹಾಗೂ ದಿಟ್ಟ ಪೊಲೀಸ್ ಅಧಿಕಾರಿಯೆಂದೇ ಹೆಸರಾಗಿದ್ದ ಕಿರಣ್ ಬೇಡಿ, ತಮ್ಮ ಖಾಸಗಿ ವಿಷಯಕ್ಕೆ ದಿಲ್ಲಿ ಪೊಲೀಸರನ್ನು ಅನಧಿಕೃತವಾಗಿ ಬಳಸಿಕೊಂಡಿರುವುದು ಹಾಗೂ ತಮ್ಮ ಪುತ್ರಿ ಸೈನಾ ಹಾಗೂ ಆಕೆಯ ಸಂಗಾತಿ ಗೋಪಾಲ್ ಸೂರಿಯ ಚಲನವಲನಗಳ ಮೇಲೆ ಕಣ್ಗಾವಲು ಹಾಕುವ ಮೂಲಕ ಅವರ ಖಾಸಗಿ ಬದುಕನ್ನು ಉಲ್ಲಂಘಿಸಿರುವುದು ಈ ಇಮೇಲ್ ಗಳಿಂದ ಬಯಲಾಗಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು The News Minute ಹಾಗೂ News Laundry ಸುದ್ದಿ ಸಂಸ್ಥೆಗಳು ಕಿರಣ್ ಬೇಡಿಯವರನ್ನು ಸಂಪರ್ಕಿಸಿದಾಗ, ಅವರು ತಮ್ಮ ಇಮೇಲ್ ಗಳನ್ನು ನಿರಾಕರಿಸಿಲ್ಲ. ಆದರೆ, ಕಿರಣ್ ಬೇಡಿ ಕಳಿಸಿದ್ದಾರೆನ್ನಲಾದ ಇಮೇಲ್ ಗಳು ತಮಗೆ ಸಂಬಂಧಪಟ್ಟಿವೆ ಎಂಬುದನ್ನು ನಿರಾಕರಿಸಿರುವ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ವೇದ್ ಭೂಷಣ್, ಆ ಇಮೇಲ್ ಖಾತೆ ನನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ಅನುಮಾನಾಸ್ಪದ ವೀಸಾ ವ್ಯವಹಾರದಲ್ಲಿ ತೊಡಗಿದ್ದ ಸೈನಾ ಹಾಗೂ ಗೋಪಾಲ್ ಸೂರಿ ಜೋಡಿ, ಆಂತಾರಾಷ್ಟ್ರೀಯ ವೀಸಾ ಕೋರಿ ತಮ್ಮ ಬಳಿ ಬರುವ ಗ್ರಾಹಕರಿಗೆ ವಂಚಿಸುತ್ತಿದ್ದರು ಹಾಗೂ ತಮ್ಮ ಗ್ರಾಹಕರಿಗೆ ವೀಸಾ ಒದಗಿಸಲು ರಾಜತಾಂತ್ರಿಕ ಅಧಿಕಾರಿಗಳಿಗೆ ಹೆಣ್ಣು, ಮದ್ಯ ಹಾಗೂ ಹಣದ ಆಮಿಷವೊಡ್ಡುತ್ತಿದ್ದರು ಎಂಬ ಗಂಭೀರ ಆರೋಪಗಳೂ ಈ ಇಮೇಲ್ ಗಳಲ್ಲಿ ವ್ಯಕ್ತವಾಗಿದೆ.
ಕೃಪೆ: newslaundry.com