ಭಯೋತ್ಪಾದನೆ ಆರೋಪಿ ಪ್ರಜ್ಞಾ ಠಾಕೂರ್‌ ಗೆ ಸನ್ಮಾನಕ್ಕೆ ಹಿಂದು ಸಂಘಟನೆಗೆ ಬಾಂಬೆ ಹೈಕೋರ್ಟ್ ಅನುಮತಿ

Update: 2025-03-29 22:26 IST
ಭಯೋತ್ಪಾದನೆ ಆರೋಪಿ ಪ್ರಜ್ಞಾ ಠಾಕೂರ್‌ ಗೆ ಸನ್ಮಾನಕ್ಕೆ ಹಿಂದು ಸಂಘಟನೆಗೆ ಬಾಂಬೆ ಹೈಕೋರ್ಟ್ ಅನುಮತಿ

PC - Pragya Singh Thakur / Facebook

  • whatsapp icon

ಮುಂಬೈ: ಬಾಂಬೆ ಉಚ್ಚ ನ್ಯಾಯಾಲಯವು, 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕಿ ಪ್ರಜ್ಞಾ ಠಾಕೂರ್ ಅವರನ್ನು ಮಾ.30ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಸನ್ಮಾನಿಸಲು ಹಿಂದು ಸಂಘಟನೆ ‘ಸಕಲ ಹಿಂದು ಸಮಾಜ’ಕ್ಕೆ ಅನುಮತಿ ನೀಡಿದೆ.

ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ರವೀಂದ್ರ ಘುಘೆ ಮತ್ತು ಅಶ್ವಿನ ಭೋಬೆ ಅವರ ಪೀಠವು ನಾಸಿಕ್ ಜಿಲ್ಲೆಯ ಮಾಲೆಗಾಂವ್ ನಗರದಲ್ಲಿ ಮಾ.30ರಂದು ಯುಗಾದಿ ಆಚರಣೆಗೆ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಠಾಕೂರ್‌ ರನ್ನು ಸನ್ಮಾನಿಸಲು ಸಕಲ ಹಿಂದು ಸಮಾಜಕ್ಕೆ ಹಸಿರು ನಿಶಾನೆಯನ್ನು ತೋರಿಸಿತು.

ಕಾರ್ಯಕ್ರಮವನ್ನು ಹಲವಾರು ಷರತ್ತುಗಳಿಗೆ ಒಳಪಟ್ಟು ಬೆಳಿಗ್ಗೆ ಏಳರಿಂದ ಸಂಜೆ ಐದು ಗಂಟೆಯವರೆಗೆ ನಡೆಸಬಹುದು ಎಂದು ಅದು ತಿಳಿಸಿತು. 2019ರಿಂದ 2024ರವರೆಗೆ ಭೋಪಾಲ ಸಂಸದೆಯಾಗಿದ್ದ ಠಾಕೂರ್ ಅವರಿಗೆ ಕಾರ್ಯಕ್ರಮದಲ್ಲಿ ‘ಹಿಂದು ವೀರ’ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು.

ಸಕಲ ಹಿಂದು ಸಮಾಜವು ಕಾರ್ಯಕ್ರಮಕ್ಕೆ ಅನುಮತಿ ಕೋರಿ ಫೆ.18ರಂದು ಮಾಲೆಗಾಂವ ತಹಶೀಲ್ದಾರರಿಗೆ ಅರ್ಜಿಯನ್ನು ಸಲ್ಲಿಸಿತ್ತು. ಕಾರ್ಯಕ್ರಮವು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವನ್ನುಂಟು ಮಾಡಬಹುದು ಎಂದು ಕಳವಳ ವ್ಯಕ್ತಪಡಿಸಿ ಸ್ಥಳೀಯ ಪೋಲಿಸರು ಸಲ್ಲಿಸಿದ್ದ ವರದಿಯ ಆಧಾರದಲ್ಲಿ ಮಾ.25ರಂದು ತಹಶೀಲ್ದಾರರು ಅನುಮತಿಯನ್ನು ನಿರಾಕರಿಸಿದ್ದರು.

ಇದರ ವಿರುದ್ಧ ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಲನ್ನೇರಿದ್ದ ಸಕಲ ಹಿಂದು ಸಮಾಜವು,ಅನುಮತಿ ನಿರಾಕರಣೆಯು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸಂವಿಧಾನದ ವಿಧಿ 25ರಡಿ ತನ್ನ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ವಾದಿಸಿತ್ತು.

ಕಾರ್ಯಕ್ರಮದಲ್ಲಿ ಯಾವುದೇ ಧರ್ಮವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಗುವುದಿಲ್ಲ ಎಂದು ಲಿಖಿತ ಮುಚ್ಚಳಿಕೆಯನ್ನು ಮಾಲೆಗಾಂವ ಎಸ್‌ಪಿಗೆ ಸಲ್ಲಿಸುವಂತೆ ಉಚ್ಚ ನ್ಯಾಯಾಲಯವು ಸಕಲ ಹಿಂದು ಸಮಾಜಕ್ಕೆ ತಿಳಿಸಿದೆ.

ಕಾರ್ಯಕ್ರಮ ನಡೆಯಲಿರುವ ಮೈದಾನಕ್ಕೆ ನಿರ್ದಿಷ್ಟ ಮಾರ್ಗವನ್ನು ನಿಗದಿಗೊಳಿಸುವಂತೆ ಹಾಗೂ ಅದು ಜನಸಂದಣಿಯ ಮತ್ತು ಇಕ್ಕಟ್ಟಿನ ಪ್ರದೇಶಗಳಿಂದ ಹಾದು ಹೋಗುವುದಿಲ್ಲ ಎನ್ನುವುದನ್ನು ಖಚಿತಪಡಿಸುವಂತೆ ಉಚ್ಚ ನ್ಯಾಯಾಲಯವು ಪೋಲಿಸರಿಗೆ ನಿರ್ದೇಶನ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News