ಕಾಂಗ್ರೆಸ್ ಸಮಿತಿಗಳಂತಲ್ಲ, ನಮ್ಮ ಸಮಿತಿ ಬುದ್ಧಿ ಉಪಯೋಗಿಸುತ್ತದೆ: ವಕ್ಫ್ ತಿದ್ದುಪಡಿ ಮಸೂದೆ ಚರ್ಚೆಯಲ್ಲಿ ಅಮಿತ್ ಶಾ ವ್ಯಂಗ್ಯ

ಕೇಂದ್ರ ಗೃಹ ಸಚಿವ ಅಮಿತ್ ಶಾ (Screengrab: X/@ani)
ಹೊಸದಿಲ್ಲಿ: ಲೋಕಸಭೆಯಲ್ಲಿ ಇಂದು ಮಂಡನೆಯಾದ ವಕ್ಫ್ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ವಕ್ಫ್ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಅದನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ವಿರೋಧ ಪಕ್ಷಗಳು ಬಯಸಿದ್ದರಿಂದ, ಅದನ್ನು ಜಂಟಿ ಸದನ ಸಮಿತಿಯ ಪರಿಶೀಲನೆಗೆ ಕಳಿಸಲಾಗಿತ್ತು. ಮಸೂದೆಯನ್ನು ಪರಾಮರ್ಶಿಸಿದ ಸಮಿತಿಯು, ತನ್ನ ಶಿಫಾರಸುಗಳನ್ನು ಕೇಂದ್ರ ಸರಕಾರಕ್ಕೆ ಕಳಿಸಿದೆ. ಅದರ ಶಿಫಾರಸುಗಳನ್ನು ಕಿರಣ್ ರಿಜಿಜು ಸದನದಲ್ಲಿ ಮಂಡಿಸಿದ್ದಾರೆ. ನಮ್ಮ ಸಮಿತಿಯು ತನ್ನ ಬುದ್ಧಿ ಉಪಯೋಗಿಸಿದೆ" ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
"ನಾವು ಕಾಂಗ್ರೆಸ್‌ನಂಥ ಸಮಿತಿಯನ್ನು ಹೊಂದಿಲ್ಲ. ನಮ್ಮ ಬಳಿ ಬುದ್ಧಿ ಉಪಯೋಗಿಸುವ ಪ್ರಜಾಸತ್ತಾತ್ಮಕ ಸಮಿತಿ ಇದೆ" ಎಂದು ಅವರು ಕಾಂಗ್ರೆಸ್‌ನ ಕಾಲೆಳೆದರು.
"ನಮ್ಮ ಸಮಿತಿಗಳು ಚರ್ಚೆಗಳನ್ನು ನಡೆಸುತ್ತವೆ. ಆ ಚರ್ಚೆಗಳ ಆಧಾರದಲ್ಲಿ ಕೆಲಸ ಮಾಡುತ್ತವೆ ಹಾಗೂ ಬದಲಾವಣೆಗಳನ್ನು ತರುತ್ತವೆ. ಸಮಿತಿ ಶಿಫಾರಸು ಮಾಡಿರುವ ಬದಲಾವಣೆಗಳನ್ನು ಒಪ್ಪುವುದಿಲ್ಲವೆಂದರೆ, ಆ ಸಮಿತಿಗೆ ಅರ್ಥವೇನಿದೆ?" ಎಂದು ಅವರು ಪ್ರಶ್ನಿಸಿದರು.
ಈ ನಡುವೆ, ಈ ವಕ್ಫ್ ಮಸೂದೆಯಲ್ಲಿ ಮಾಡಿರುವಂತೆ ಜಂಟಿ ಸದನ ಸಮಿತಿಗೆ ಮಸೂದೆಗೆ ತಿದ್ದುಪಡಿ ಮಾಡುವ ಯಾವುದೇ ಅಧಿಕಾರವಿಲ್ಲ ಎಂದು ಕೇರಳದ ಆರ್‌ಎಸ್‌ಪಿ ಸಂಸದ ಎನ್.ಕೆ.ಪ್ರೇಮಚಂದನ್ ವಾದಿಸಿದರು. ಇದಕ್ಕೆ ಪ್ರತಿಯಾಗಿ, "ಮಸೂದೆಗೆ ತಿದ್ದುಪಡಿ ಮಾಡುವ ಅಧಿಕಾರ ಸಮಿತಿಗಿದೆ. ಅದು ಮಸೂದೆಯ ಹೆಸರನ್ನೂ ಬದಲಾವಣೆ ಮಾಡಬಹುದಾಗಿದೆ. ಅದು ಮಸೂದೆಯಲ್ಲಿ ಹೊಸ ನಿಯಮಗಳನ್ನೂ ಅಳವಡಿಸಬಹುದಾಗಿದೆ. ಈ ಹಿಂದೆ ಹಲವಾರು ಜಂಟಿ ಸದನ ಸಮಿತಿಗಳು ಮಸೂದೆಗಳಿಗೆ ತಿದ್ದುಪಡಿಗಳನ್ನು ಮಾಡಿವೆ" ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಮರ್ಥಿಸಿಕೊಂಡರು.
ಇಂದು ಮಂಡನೆಯಾಗಿರುವ ವಕ್ಫ್ ತಿದ್ದುಪಡಿ ಮೇಲಿನ ಚರ್ಚೆಗೆ ಕಾರ್ಯಕಲಾಪಗಳ ಸಲಹಾ ಸಮಿತಿಯು ಒಟ್ಡು ಎಂಟು ಗಂಟೆಗಳ ಕಾಲಾವಕಾಶವನ್ನು ನಿಗದಿಗೊಳಿಸಿದೆ. ಅಗತ್ಯತೆಯನ್ನು ಆಧರಿಸಿ, ಈ ಅವಧಿ ವಿಸ್ತರಣೆಗೊಳ್ಳುವ ಸಾಧ್ಯತೆಯೂ ಇದೆ. ವಕ್ಫ್ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಗೆ ನಿಗದಿಯಾಗಿರುವ ಒಟ್ಟು ಎಂಟು ಗಂಟೆಗಳ ಕಾಲಾವಧಿಯ ಪೈಕಿ ಆಡಳಿತಾರಾಢ ಎನ್‌ಡಿಎ ಮೈತ್ರಿಕೂಟಕ್ಕೆ 4 ಗಂಟೆ 40 ನಿಮಿಷಗಳ ಕಾಲಾವಧಿಯನ್ನು ನಿಗದಿಗೊಳಿಸಲಾಗಿದ್ದರೆ, ವಿರೋಧ ಪಕ್ಷಗಳಿಗೆ 3 ಗಂಟೆ 20 ನಿಮಿಷಗಳ ಕಾಲಾವಧಿಯನ್ನು ನಿಗದಿಗೊಳಿಸಲಾಗಿದೆ.