ಸಾಬರಮತಿ ಆಶ್ರಮದ ಪುನರಾಭಿವೃದ್ಧಿ ಯೋಜನೆ ವಿರುದ್ಧ ತುಷಾರ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಸುಪ್ರೀಂ | PC : PTI
ಹೊಸದಿಲ್ಲಿ: ಅಹ್ಮದಾಬಾದ್ ನಲ್ಲಿ ಮಹಾತ್ಮಾ ಗಾಂಧಿಯವರು ಸ್ಥಾಪಿಸಿದ ಸಾಬರಮತಿ ಆಶ್ರಮವನ್ನು ಪುನರಾಭಿವೃದ್ಧಿಗೊಳಿಸುವ ಗುಜರಾತ್ ಸರಕಾರದ ಯೋಜನೆಯನ್ನು ಪ್ರಶ್ನಿಸಿ ಗಾಂಧೀಜಿಯವರ ಮರಿಮೊಮ್ಮಗ ತುಷಾರ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ.
ಈ ವಿಷಯದಲ್ಲಿ ತುಷಾರ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ 2022ರ ಗುಜರಾತ್ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವಲ್ಲಿ ಸುಮಾರು ಎರಡೂವರೆ ವರ್ಷಗಳ ವಿಳಂಬವನ್ನು ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ ಮತ್ತು ರಾಜೇಶ ಬಿಂಡಲ್ ಅವರ ಪೀಠವು ಉಲ್ಲೇಖಿಸಿತು.
ಗಾಂಧಿ ಆಶ್ರಮ ಎಂದೂ ಕರೆಯಲಾಗುವ ಸಾಬರಮತಿ ಆಶ್ರಮವನ್ನು ಮಹಾತ್ಮಾ ಗಾಂಧಿಯವರು 1917ರಲ್ಲಿ ಸ್ಥಾಪಿಸಿದ್ದರು.
ಆಶ್ರಮದ ಪುನರಾಭಿವೃದ್ಧಿಗಾಗಿ ಗುಜರಾತ್ ಸರಕಾರದ ಪ್ರಸ್ತಾವಿತ 1,200 ಕೋ.ರೂ.ಗಳ ಯೋಜನೆಯು ಶತಮಾನದಷ್ಟು ಹಳೆಯದಾದ ಆಶ್ರಮದ ಸ್ವರೂಪವನ್ನೇ ಬದಲಿಸುತ್ತದೆ ಮತ್ತು ಅದರ ತತ್ವಗಳನ್ನು ಕಳಂಕಿತಗೊಳಿಸಲಿದೆ ಎಂದು ತನ್ನ ಅರ್ಜಿಯಲ್ಲಿ ವಾದಿಸಿದ್ದ ತುಷಾರ ಗಾಂಧಿ, ಯೋಜನೆಯಲ್ಲಿ ಸಂರಕ್ಷಿಸಲಾಗುವ 40 ಕಟ್ಟಡಗಳನ್ನು ಗುರುತಿಸಲಾಗಿದ್ದು,ಉಳಿದ ಸುಮಾರು 200 ನಿರ್ಮಾಣಗಳನ್ನು ನಾಶಗೊಳಿಸಲಾಗುತ್ತದೆ ಅಥವಾ ಮರುನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದ್ದರು.
ರಾಜ್ಯ ಸರಕಾರವು ಭರವಸೆ ನೀಡಿದ್ದರೂ ಆಶ್ರಮದ ಮುಖ್ಯ ಪ್ರದೇಶವು ಹಾನಿಗೀಡಾಗಬಹುದು ಎಂಬ ಆತಂಕವಷ್ಟೇ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಲು ಸಿಂಧುವಾದ ಕಾರಣವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.
ಆಶ್ರಮದ ಅಸ್ತಿತ್ವದಲ್ಲಿರುವ ರಚನೆಗೆ ಹಾನಿಯನ್ನುಂಟು ಮಾಡುವುದಿಲ್ಲ ಅಥವಾ ಬದಲಿಸುವುದಿಲ್ಲ ಎಂದು ರಾಜ್ಯ ಸರಕಾರವು ನೀಡಿದ್ದ ಭರವಸೆಯನ್ನು 2022ರಲ್ಲಿ ಗುಜರಾತ್ ಉಚ್ಚ ನ್ಯಾಯಾಲಯವು ಒಪ್ಪಿಕೊಂಡಿತ್ತು.
ಪ್ರಸ್ತಾವಿತ ಯೋಜನೆಯು ಮಹಾತ್ಮಾ ಗಾಂಧಿಯವರ ಪರಿಕಲ್ಪನೆಗಳು ಮತ್ತು ಚಿಂತನೆಗಳಿಗೆ ಪ್ರಚಾರ ನೀಡುವುದು ಮಾತ್ರವಲ್ಲ,ಅದು ಸಮಾಜಕ್ಕೂ ಮನುಕುಲಕ್ಕೂ ಲಾಭದಾಯಕವಾಗಲಿದೆ ಎಂದು ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು.