ಚೀನಾ, ಪಾಕ್‌ನಲ್ಲಿ ಕಡಿಮೆ ಬೆಲೆಗೆ ಸಿಗುವ ಔಷಧಿ ಭಾರತದಲ್ಲಿ ದುಬಾರಿ ಯಾಕೆ?: ಸುಪ್ರೀಂ ಕೋರ್ಟ್

Update: 2025-04-05 21:13 IST
Photo of Supreme court of India

ಸುಪ್ರೀಂ | PTI 

  • whatsapp icon

ಹೊಸದಿಲ್ಲಿ: ಅಪರೂಪದ ಕಾಯಿಲೆ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (ಎಸ್‌ಎಮ್‌ಎ)ಯ ಚಿಕಿತ್ಸೆಯಲ್ಲಿ ಬಳಸಲಾಗುವ ರಿಸ್ಡಿಪ್ಲಾಮ್‌ ನ್ನು ನೆರೆಯ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಅಗ್ಗದ ದರದಲ್ಲಿ ಪೂರೈಸಿದರೆ, ಭಾರತದಲ್ಲೂ ಅದು ಕಡಿಮೆ ಬೆಲೆಗೆ ಸಿಗುವಂತೆ ಮಾಡಬಹುದೇ ಎನ್ನುವುದನ್ನು ಸುಪ್ರೀಂ ಕೋರ್ಟ್ ಔಷಧಿಯ ತಯಾರಕ ಕಂಪೆನಿಯಿಂದ ತಿಳಿಯಬಯಸಿತು.

ಈ ಔಷಧಿಯನ್ನು ಅದರ ತಯಾರಕ ಕಂಪೆನಿ ಎಫ್. ಹಾಫ್‌ ಮನ್-ಲಾ ರೋಶ್ ಲಿ. ಪಾಕಿಸ್ತಾನ ಮತ್ತು ಚೀನಾಗಳಲ್ಲಿ ಭಾರತಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ ಎಂಬುದಾಗಿ ಎಸ್‌ ಎಮ್‌ ಎ ಯಿಂದ ಬಳಲುತ್ತಿರುವ ಮಹಿಳೆಯೊಬ್ಬರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆಗ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು ಔಷಧ ತಯಾರಕ ಕಂಪೆನಿಗೆ ಈ ಪ್ರಶ್ನೆ ಕೇಳಿತು.

‘‘ಈ ವಿವಾದವನ್ನು ಗಮನಿಸುತ್ತಾ, ರಿಸ್ಡಿಪ್ಲಾಮ್ ಔಷಧಿಯ ತಯಾರಕ ಕಂಪೆನಿ ನಿ ಎಫ್. ಹಾಫ್‌ ಮನ್-ಲಾ ರೋಶ್ ಲಿ.ಗೆ ನೋಟಿಸ್ ನೀಡುವುದು ಸೂಕ್ತ ಎಂಬುದಾಗಿ ನಾವು ಭಾವಿಸುತ್ತೇವೆ. ಈ ಔಷಧಿಗೆ ನೆರೆಯ ದೇಶಗಳಲ್ಲಿ ಯಾವ ಬೆಲೆ ನಿಗದಿಪಡಿಸಲಾಗಿದೆ ಎನ್ನುವುದನ್ನು ಮುಂದಿನ ವಿಚಾರಣೆಯಂದು ನ್ಯಾಯಾಲಯಕ್ಕೆ ತಿಳಿಸಬೇಕು. ಅಲ್ಲಿನ ಬೆಲೆಯು ಭಾರತದಲ್ಲಿ ನಿಗದಿಪಡಿಸಿರುವ ಬೆಲೆಗಿಂತ ಕಡಿಮೆಯಾದರೆ, ಭಾರತದಲ್ಲೂ ಅದೇ ಕಡಿಮೆ ಬೆಲೆಯಲ್ಲಿ ಆ ಔಷಧಿಯನ್ನು ಪೂರೈಸಲು ಸಾಧ್ಯವೇ ಎನ್ನುವುದನ್ನೂ ನ್ಯಾಯಾಲಯಕ್ಕೆ ತಿಳಿಸಬೇಕು’’ ಎಂದು ನ್ಯಾಯಾಲಯ ಸೂಚಿಸಿತು.

ಚೀನಾ ಮತ್ತು ಪಾಕಿಸ್ತಾನಿ ಸರಕಾರಗಳ ಮಧ್ಯಪ್ರವೇಶದಿಂದಾಗಿ ಆ ದೇಶಗಳಲ್ಲಿ ಈ ಔಷಧದ ಬೆಲೆ ಅಗ್ಗವಾಗಿದೆ ಎಂದು ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಆನಂದ್ ಗ್ರೋವರ್ ತಿಳಿಸಿದರು.

ಅಪರೂಪದ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಿಯು ಕಡಿಮೆ ದರದಲ್ಲಿ ಭಾರತದಲ್ಲೂ ಸಿಗುವಂತೆ ಮಾಡಲು ಭಾರತ ಸರಕಾರವು ಯಾಕೆ ಜಾಗತಿಕ ಔಷಧ ತಯಾರಿಕಾ ಕಂಪೆನಿಯ ಜೊತೆ ಮಾತುಕತೆ ನಡೆಸಬಾರದು ಎಂಬುದಾಗಿ ಗ್ರೋವರ್ ನ್ಯಾಯಾಲಯದಲ್ಲಿ ಹೇಳಿದರು.

ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು ಎಪ್ರಿಲ್ 8ಕ್ಕೆ ನಿಗದಿಪಡಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News