ಕೊಚ್ಚಿನ್ | ಕಡಿಮೆ ಕ್ಷಮತೆಯ ಸಿಬ್ಬಂದಿಗೆ ಖಾಸಗಿ ಕಂಪನಿ ನೀಡಿದ ಶಿಕ್ಷೆ ಏನು ಗೊತ್ತೇ?

Update: 2025-04-06 08:19 IST
ಕೊಚ್ಚಿನ್ | ಕಡಿಮೆ ಕ್ಷಮತೆಯ ಸಿಬ್ಬಂದಿಗೆ ಖಾಸಗಿ ಕಂಪನಿ ನೀಡಿದ ಶಿಕ್ಷೆ ಏನು ಗೊತ್ತೇ?
ಸಾಂದರ್ಭಿಕ ಚಿತ್ರ
  • whatsapp icon

ಕೊಚ್ಚಿನ್ : ಖಾಸಗಿ ಮಾರ್ಕೆಟಿಂಗ್ ಕಂಪನಿಯೊಂದು ಕಡಿಮೆ ಕ್ಷಮತೆಯ ಸಿಬ್ಬಂದಿಯನ್ನು ಸರಪಣಿ ಬಿಗಿದ ನಾಯಿಗಳಂತೆ ಮೊಣಕಾಲಿನಲ್ಲಿ ನಡೆಸಿದ ಮತ್ತು ನೆಲದಲ್ಲಿ ಹರಡಿದ ನಾಣ್ಯಗಳನ್ನು ನೆಕ್ಕುವಂತೆ ಬಲವಂತಪಡಿಸಿ ಶಿಕ್ಷಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳೀಯ ಟಿವಿ ಚಾನಲ್‍ಗಳಲ್ಲಿ ಈ ಶಿಕ್ಷೆಯ ದೃಶ್ಯತುಣುಕುಗಳು ಪ್ರಸಾರವಾದ ಬೆನ್ನಲ್ಲೇ ಕೇರಳ ಕಾರ್ಮಿಕ ಇಲಾಖೆ ಈ ಅಮಾನವೀಯ ಕಿರುಕುಳದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ.

ಘಟನೆಯ ಬಗ್ಗೆ ತನಿಖೆ ನಡೆಸಿ, ತಕ್ಷಣ ವರದಿ ಸಲ್ಲಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ರಾಜ್ಯ ಕಾರ್ಮಿಕ ಸಚಿವ ವಿ.ಶಿವನ್‍ಕುಟ್ಟಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಬಾರುಕೋಲು ಹಿಡಿದ ವ್ಯಕ್ತಿಯೊಬ್ಬ ಮತ್ತೊಬ್ಬನನ್ನು ನಾಯಿಯನ್ನು ಹೋಲುವಂತೆ ಮೊಣಕಾಲಿನಲ್ಲಿ ತೆವಳಲು ಬಲವಂತಪಡಿಸುತ್ತಿರುವ ದೃಶ್ಯಾವಳಿ ಪ್ರಸಾರವಾಗಿತ್ತು.

ಗುರಿ ತಲುಪದ ಸಿಬ್ಬಂದಿಗೆ ಆ ಖಾಸಗಿ ಕಂಪನಿಯ ಆಡಳಿತ ಈ ಶಿಕ್ಷೆ ವಿಧಿಸಿತ್ತು ಎಂದು ಟಿವಿ ಚಾನಲ್‍ಗೆ ಮಾಹಿತಿ ನೀಡಲಾಗಿತ್ತು. ಕಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಂಪನಿ ಇದಾಗಿದ್ದು, ಪೆರಂಬವೂರು ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಹಾಗೂ ಮಾಲಕರು ಈ ಆರೋಪ ನಿರಾಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದು ಆಘಾತಕಾರಿ ಎಂದು ಬಣ್ಣಿಸಿರುವ ಸಚಿವ ಶಿವನ್‍ಕುಟ್ಟಿ, ಕೇರಳದಂಥ ರಾಜ್ಯದಲ್ಲಿ ಯಾವುದೇ ಕಾರಣಕ್ಕೆ ಇದನ್ನು ಒಪ್ಪಿಕೊಳ್ಳಲಾಗದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News