ಬಿಹಾರ್ ಸಿಎಂ ನಿವಾಸಕ್ಕೆ ಪ್ರತಿಭಟನಾ ರ‍್ಯಾಲಿ; ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ವಶಕ್ಕೆ

ಕನ್ಹಯ್ಯ ಕುಮಾರ್ | PTI
ಪಾಟ್ನಾ: ಯುವ ಕಾಂಗ್ರೆಸ್ ನ ರಾಷ್ಟ್ರಾಧ್ಯಕ್ಷ ಉದಯ್ ಭಾನ್ ಹಾಗೂ ಅವರ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸಕ್ಕೆ ಪ್ರತಿಭಟನಾ ರ‍್ಯಾಲಿ ನಡೆಸಿದ ಕಾಂಗ್ರೆಸ್ ನಾಯಕ ಹಾಗೂ ಎನ್ಎಸ್ಯುಐ (ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ)ಯ ಉಸ್ತುವಾರಿ ಕನ್ಹಯ್ಯ ಕುಮಾರ್ ಅವರನ್ನು ಪಾಟ್ನಾದಲ್ಲಿ ಶುಕ್ರವಾರ ಬಂಧಿಸಲಾಯಿತು.
ಕಾಂಗ್ರೆಸ್ ನಿಯೋಗ ನಿತೀಶ್ ಕುಮಾರ್ ಅವರ ನಿವಾಸದತ್ತ ರ‍್ಯಾಲಿ ನಡೆಸಿದ ಸಂದರ್ಭ ಪೊಲೀಸರು ಲಾಠಿ ಪ್ರಹಾರ ನಡೆಸಿದರು ಹಾಗೂ ಜಲ ಫಿರಂಗಿಗಳನ್ನು ಪ್ರಯೋಗಿಸಿದರು.
ಯುವಜನರಿಗೆ ಉದ್ಯೋಗ ಒದಗಿಸುವಲ್ಲಿ ನಿತೀಶ್ ಕುಮಾರ್ ಆಡಳಿತದ ವಿಫಲತೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ರ‍್ಯಾಲಿ ನಡೆಸಿದ ಸಂದರ್ಭ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮುಖಾಮುಖಿ ನಡೆಯಿತು.
ಪೊಲೀಸರು ಪ್ರತಿಭಟನಕಾರರನ್ನು ಮುಖ್ಯ ಮಂತ್ರಿ ನಿವಾಸದ ಸಮೀಪ ತಡೆದರು. ಈ ಸಂದರ್ಭ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಆದುದರಿಂದ ಪೊಲೀಸರು ಕನ್ಹಯ್ಯ ಹಾಗೂ ಇತರ 30 ಮಂದಿಯನ್ನು ವಶಕ್ಕೆ ತೆಗೆದುಕೊಂಡರು. ಇದಕ್ಕಿಂತ ಮುನ್ನ ಅವರು ಇತರ ಪ್ರತಿಭಟನಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು ಹಾಗೂ ಜಲ ಪಿರಂಗಿ ಪ್ರಯೋಗಿಸಿದರು.
‘‘ನಮಗೆ ಜಲಫಿರಂಗಿಗಳು ಬೇಡ. ನಮ್ಮ ನಳ್ಳಿಯಲ್ಲಿ ನೀರು ಬರಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ನಮ್ಮ ಮೇಲೆ ನೀರು ಸಿಂಪಡಿಸುವುದನ್ನು ನಾವು ಬಯಸುವುದಿಲ್ಲ. ಆದರೆ, ಕುಡಿಯುವ ನೀರು ಯೋಜನೆಯ ಅಡಿಯಲ್ಲಿ ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಬಯಸುತ್ತೇವೆ. ಸರಕಾರಕ್ಕೆ ನಳ್ಳಿಗಳಲ್ಲಿ ನೀರು ಪೂರೈಸಲು ಆಗುತ್ತಿಲ್ಲ. ಆದರೆ, ಜಲಫಿರಂಗಿಗಳು ಮೂಲಕ ವಿದ್ಯಾರ್ಥಿಗಳು ಹಾಗೂ ಯುವಕರ ಮೇಲೆ ನೀರು ಹಾಯಿಸುತ್ತಿದೆ’’ ಎಂದು ಪೊಲೀಸರ ವಶವಾಗುವ ಮುನ್ನ ಕನ್ಹಯ್ಯ ಕುಮಾರ್ ಹೇಳಿದರು.