ಮೋಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿ | ಕ್ವಾರ್ಟರ್ ಫೈನಲ್ ನಲ್ಲಿ ರೋಹನ್ ಬೋಪಣ್ಣ ಜೋಡಿಗೆ ಸೋಲು

ರೋಹನ್ ಬೋಪಣ್ಣ | PC : PTI
ಮೋಂಟೆ ಕಾರ್ಲೊ (ಫ್ರಾನ್ಸ್): ಫ್ರಾನ್ಸ್ನ ಮೋಂಟೆ ಕಾರ್ಲೊ ಕಂಟ್ರಿ ಕ್ಲಬ್ನಲ್ಲಿ ನಡೆಯುತ್ತಿರುವ ಮೋಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಭಾರತೀಯ ರೋಹನ್ ಬೋಪಣ್ಣ ಮತ್ತು ಅವರ ಅಮೆರಿಕದ ಜೋಡಿ ಬೆನ್ ಶೆಲ್ಟನ್ ಶುಕ್ರವಾರ ಸೋಲನುಭವಿಸಿದ್ದಾರೆ.
ಅವರನ್ನು ಮೊನೆಗಸ್ಕ್ ರೊಮೇನ್ ಅರ್ನೇಡೊ ಮತ್ತು ಮ್ಯಾನುಯಲ್ ಗಿನಾರ್ಡ್ 6-2, 4-6, 10-7 ಸೆಟ್ಗಳಿಂದ ಸೋಲಿಸಿದರು.
ಇದು ಮೋಂಟೆ ಕಾರ್ಲೊ ಮಾಸ್ಟರ್ಸ್ನಲ್ಲಿ ಬೋಪಣ್ಣರ ಆರನೇ ಕ್ವಾರ್ಟರ್ ಫೈನಲ್ ಪಂದ್ಯವಾಗಿತ್ತು. 2017ರಲ್ಲಿ ಅವರು ಅಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು.
ಎರಡನೇ ಸುತ್ತಿನಲ್ಲಿ ಬೋಪಣ್ಣ-ಶೆಲ್ಟನ್ ಮೂರನೇ ಶ್ರೇಯಾಂಕದ ಸಿಮೋನ್ ಬೊಲೆಲಿ ಮತ್ತು ಆ್ಯಂಡ್ರೀ ವವಸೊರಿ ಜೋಡಿಯನ್ನು 2-6, 7-6(4), 10-7 ಸೆಟ್ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಗೆ ನೆಗೆದಿದ್ದರು.
ಮೊದಲ ಸುತ್ತಿನಲ್ಲಿ ಫ್ರಾನ್ಸಿಸ್ಕೊ ಸೆರುಂಡೊಲೊ ಮತ್ತು ಅಲೆಜಾಂಡ್ರೊ ಟಬಿಲೊ ವಿರುದ್ಧ ಗೆಲುವು ಸಾಧಿಸಿದ ಬಳಿಕ, ಬೋಪಣ್ಣ ಎಟಿಪಿ ಮಾಸ್ಟರ್ಸ್ 1000 ಮಟ್ಟದ ಪಂದ್ಯಾವಳಿಯೊಂದರಲ್ಲಿ ಸಿಂಗಲ್ಸ್ ಅಥವಾ ಡಬಲ್ಸ್ ಪಂದ್ಯವೊಂದನ್ನು ಗೆದ್ದ ಸಾರ್ವಕಾಲಿಕ ಅತಿ ಹಿರಿಯ ಆಟಗಾರನಾದರು. ಅವರಿಗೆ ಈಗ 45 ವರ್ಷ ಒಂದು ತಿಂಗಳು.
ಅವರು ಕೆನಡ ಟೆನಿಸ್ ದಂತಕತೆ ಡೇನಿಯಲ್ ನೆಸ್ಟರ್ರ ದಾಖಲೆಯನ್ನು ಮುರಿದಿದ್ದಾರೆ. ಅವರು 2017ರಲ್ಲಿ ಮ್ಯಾಡ್ರಿಡ್ ಮಾಸ್ಟರ್ಸ್ನಲ್ಲಿ ಪಂದ್ಯವೊಂದನ್ನು ಗೆದ್ದಾಗ ಅವರಿಗೆ 44 ವರ್ಷ 8 ತಿಂಗಳು ಆಗಿತ್ತು. ಅವರು ಆ ಪಂದ್ಯವನ್ನು ಬೋಪಣ್ಣ ವಿರುದ್ಧವೇ ಗೆದ್ದಿದ್ದರು.