‘ಫುಲೆ’ ಚಿತ್ರಕ್ಕಿಲ್ಲ ಬಿಡುಗಡೆ ಭಾಗ್ಯ: ಕತ್ತರಿ ಹಾಕಲು ಸೂಚಿಸಿದ ಸೆನ್ಸಾರ್ ಮಂಡಳಿ

Image Source : IMDB
ಮುಂಬೈ: ಅನಂತ್ ಮಹಾದೇವನ್ ನಿರ್ದೇಶನದ ‘ಫುಲೆ’ ಚಿತ್ರದ ಬಿಡುಗಡೆಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ. ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಈ ಚಿತ್ರದ ಬಿಡುಗಡೆಯಾಗಬೇಕಿತ್ತು.
ಮಹಾರಾಷ್ಟ್ರದ ಬ್ರಾಹ್ಮಣ ಸಮುದಾಯದ ಒಂದು ವರ್ಗವು ಚಿತ್ರದಲ್ಲಿನ ತಮ್ಮ ಚಿತ್ರಣದ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎನ್ನಲಾಗಿದೆ. ಚಿತ್ರವು ತಮ್ಮ ಸಮುದಾಯವನ್ನು ಅವಮಾನಿಸುತ್ತದೆ ಎಂದು ಬ್ರಾಹ್ಮಣ ಸಮುದಾಯ ಆರೋಪಿಸಿರುವುದು ಚಿತ್ರ ಬಿಡುಗಡೆ ಮುಂದೂಡಿಕೆಯಾಗಲು ಕಾರಣ ಎನ್ನಲಾಗಿದೆ. ಈ ಕುರಿತು ನಿರ್ದೇಶಕ ಅನಂತ್ ಮಹಾದೇವನ್ ಅವರಿಗೆ ಹಲವಾರು ಪತ್ರಗಳು ಬಂದಿವೆ.
19 ನೇ ಶತಮಾನದಲ್ಲಿ ಜಾತಿ ಮತ್ತು ಲಿಂಗ ತಾರತಮ್ಯದ ವಿರುದ್ಧ ಹೋರಾಡಿದ್ದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಕಥೆ ಆಧರಿತ ಈ ಚಿತ್ರದಲ್ಲಿ ಪ್ರತೀಕ್ ಗಾಂಧಿ ಮತ್ತು ಪತ್ರಲೇಖಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿಬಿಎಫ್ಸಿಯು ಚಿತ್ರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲು ಸೂಚಿಸಿದೆ. ‘ಮಹರ್’, ‘ಮಾಂಗ್’, ‘ಪೇಶ್ವೆ’ ಮತ್ತು ‘ಮನು ಜಾತಿ ವ್ಯವಸ್ಥೆ’ ಮುಂತಾದ ಪದಗಳನ್ನು ತೆಗೆದು ಹಾಕಲು ಸೂಚಿಸಲಾಗಿದೆ. ಚಿತ್ರದ ಕೆಲವು ಸಂಭಾಷಣೆಗಳನ್ನು ಬದಲಾಯಿಸಲೂ ಸೂಚನೆ ನೀಡಿದೆ ಎನ್ನಲಾಗಿದೆ.
ಫುಲೆ ಚಿತ್ರವು 19ನೇ ಶತಮಾನದಲ್ಲಿ ಜಾತೀಯತೆಯ ವಿರುದ್ಧ ಮತ್ತು ಮಹಿಳಾ ಶಿಕ್ಷಣವನ್ನು ಉತ್ತೇಜಿಸಲು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಮಾಡಿದ ಹೋರಾಟದ ಹಾದಿಯನ್ನು ವಿವರಿಸುತ್ತದೆ.