ತೆಲಂಗಾಣ: 86 ಮಾವೋವಾದಿಗಳು ಶರಣಾಗತ

PC : indianexpress.com
ಹೈದರಾಬಾದ್: ನೆರೆಯ ಚತ್ತೀಸ್‌ಗಢದ ಕಾನೂನು ಬಾಹಿರ ಸಿಪಿಐ (ಮಾವೋವಾದಿ)ಯ ಒಟ್ಟು 86 ಸದಸ್ಯರು ತೆಲಂಗಾಣದ ಭದ್ರಾದ್ರಿ ಕೋಥಗುಡೇಂ ಜಿಲ್ಲೆಯಲ್ಲಿ ಶನಿವಾರ ಪೊಲೀಸರ ಮುಂದೆ ಶರಣಾಗಿದ್ದಾರೆ.
ನಾಲ್ವರು ಪ್ರದೇಶ ಸಮಿತಿ ಸದಸ್ಯರು (ಎಸಿಎಂ) ಸೇರಿದಂತೆ 89 ಮಾವೋವಾದಿಗಳು ನಕ್ಸಲ್‌ವಾದದ ಹಿಂಸೆಯ ಪಥವನ್ನು ತ್ಯಜಿಸಲು ಹಾಗೂ ತಮ್ಮ ಕುಟುಂಬದೊಂದಿಗೆ ಶಾಂತಿಯುತ ಜೀವನ ನಡೆಸಲು ನಿರ್ಧರಿಸಿದ್ದಾರೆ. ಅವರು ಮುಲ್ತಿ ವಲಯ-1ರ ಐಜಿಪಿ ಎಸ್. ಚಂದ್ರಶೇಖರ್ ರೆಡ್ಡಿ ಅವರ ಮುಂದೆ ಶರಣಾಗತರಾಗಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ನಾಲ್ವರು ಪ್ರದೇಶ ಸಮಿತಿ ಸದಸ್ಯರ (ಎಸಿಎಂ) ತಲೆಗೆ ತಲಾ 4 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ಭದ್ರಾದ್ರಿ ಕೋಥಗುಡೇಂನ ಪೊಲೀಸ್ ಅಧೀಕ್ಷಕ ಬಿ. ರೋಹಿತ್ ರಾಜು ತಿಳಿಸಿದ್ದಾರೆ.
ಮಾಜಿ ಮಾವೋವಾದಿಗಳಿಗೆ ನೀಡುತ್ತಿರುವ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಪೊಲೀಸರ ಕಾರ್ಯಾಚರಣೆ ‘ಚೆಯುತಾ’ ಕಾರ್ಯಕ್ರಮದ ಅಡಿಯಲ್ಲಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ, ಕಲ್ಯಾಣ ಕಾರ್ಯಕ್ರಮಗಳ ಕುರಿತು ತಿಳಿದ ಬಳಿಕ ಮಾವೋವಾದಿಗಳು ಶರಣಾಗತರಾಗುತ್ತಿದ್ದಾರೆ.
ಈ ವರ್ಷ ಇದುವರೆಗೆ ವಿಭಿನ್ನ ಶ್ರೇಣಿಯ 224ಕ್ಕೂ ಅಧಿಕ ಮಾವೋವಾದಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.