ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಎನ್‌ಜಿಒ ಸುಪ್ರೀಂ ಕೋರ್ಟ್‌ಗೆ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಮಸೂದೆ, 2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅಸೋಸಿಯೇಶನ್ ಫಾರ್ ದ ಪ್ರೊಟೆಕ್ಶನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಎಂಬ ಸರಕಾರೇತರ ಸಂಘಟನೆಯು ಸುಪ್ರೀಂ ಕೋರ್ಟ್‌ಗೆ ಹೋಗಿದೆ.
‘‘ಈ ಮಸೂದೆಯು ಸಂವಿಧಾನದ 14, 25, 26 ಮತ್ತು 300ಎ ವಿಧಿಗಳನ್ನು ಹಾಗೂ ನಮ್ಮ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಚೌಕಟ್ಟಿನ ಆಧಾರವಾಗಿರುವ ಪೀಠಿಕೆಯ ಮೌಲ್ಯಗಳನ್ನು ನೇರವಾಗಿ ಉಲ್ಲಂಘಿಸುತ್ತದೆ’’ ಎಂದು ಅದು ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದೆ.
‘‘ಮಸೂದೆಯು ವಕ್ಫ್ ಕಾನೂನಿನಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಸೂಚಿಸಿದೆ. ಇದು ಅನಗತ್ಯ ಮಾತ್ರವಲ್ಲದೆ, ಮುಸ್ಲಿಮ್ ಸಮುದಾಯದ ಧಾರ್ಮಿಕ ವ್ಯವಹಾರಗಳಲ್ಲಿ ನಡೆಸಿದರುವ ಆಘಾತಕಾರಿ ಹಸ್ತಕ್ಷೇಪವೂ ಆಗಿದೆ. ಇದು ವಕ್ಫ್‌ನ ಮೂಲ ಉದ್ದೇಶವನ್ನೇ ದುರ್ಬಲಗೊಳಿಸಿದೆ’’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
‘‘ಎಪ್ರಿಲ್ 3ರಂದು ಲೋಕಸಭೆಯಲ್ಲಿ ಮತ್ತು ಎಪ್ರಿಲ್ 4ರಂದು ರಾಜ್ಯಸಭೆಯಲ್ಲಿ ಅವಸರವಸರವಾಗಿ ಅಂಗೀಕಾರಗೊಂಡಿರುವ ಮಸೂದೆಗೆ ರಾಷ್ಟ್ರಪತಿ ಕ್ಷಿಪ್ರವಾಗಿ ಅಂಕಿತ ಹಾಕಲಿದ್ದಾರೆ. ಆದರೆ ಅದರ ವಿಧಿಗಳು ವಕ್ಫ್ ಮಂಡಳಿಯ ಸ್ವಾಯತ್ತೆ ಮತ್ತು ಪರಿಣಾಮಕಾರಿತ್ವಕ್ಕೆ ಗಂಭೀರ ಅಪಾಯವನ್ನು ಒಡ್ಡುತ್ತವೆ. ಮುಖ್ಯವಾಗಿ ಮಸೂದೆಯ 40ನೇ ಪರಿಚ್ಛೇದವು ಮೂಲ ಕಾಯ್ದೆಯಲ್ಲಿರುವ ಸಹಜ ನ್ಯಾಯದ ತತ್ವಗಳನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ’’ ಎಂಬುದಾಗಿ ಅರ್ಜಿಯಲ್ಲಿ ಬೆಟ್ಟು ಮಾಡಲಾಗಿದೆ.