ಮಧ್ಯಪ್ರದೇಶ | ಬ್ರಿಟನ್ ಹೃದಯ ತಜ್ಞನ ಸೋಗಿನ ವ್ಯಕ್ತಿಯಿಂದ ಶಸ್ತ್ರ ಚಿಕಿತ್ಸೆ : ಕನಿಷ್ಠ 7 ಮಂದಿ ಬಲಿ!

PC: Unsplash
ದಾಮೋಹ್: ತಾನು ಬ್ರಿಟನ್ ಮೂಲದ ಹೃದಯ ತಜ್ಞನೆಂದು ಸೋಗು ಧರಿಸಿದ ವ್ಯಕ್ತಿಯೊಬ್ಬ ಎಲ್ಲೂ ಅನುಮಾನ ಬಾರದಂತೆ ರೋಗಿಗಳಿಗೆ ಅಪಾಯಕಾರಿ ಹೃದಯ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿರುವ ಆಘಾತಕಾರಿ ವೈದ್ಯಕೀಯ ವಂಚನೆಯ ಘಟನೆಯೊಂದು ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಯನ್ನು ನರೇಂದ್ರ ವಿಕ್ರಮಾದಿತ್ಯ ಯಾದವ್ ಎಂದು ಗುರುತಿಸಲಾಗಿದ್ದು, ಆತ ಬ್ರಿಟಿಷ್ ವೈದ್ಯ ಪ್ರೊ. ಎನ್.ಜಾನ್ ಕ್ಯಾಮ್ (ತನ್ನನ್ನು ತಾನು ಕೆಮ್ ಎಂದೂ ಸಂಬೋಧಿಸಿಕೊಳ್ಳುತ್ತಿದ್ದ ಆರೋಪಿ) ಎಂದು ತನ್ನನ್ನು ಬಿಂಬಿಸಿಕೊಂಡು, ದಾಮೋಹ್ ನ ಕ್ರಿಶ್ಚಿಯನ್ ಮಿಶಿನರಿ ಆಸ್ಪತ್ರೆಯೊಂದರಲ್ಲಿ ಉದ್ಯೋಗ ಗಿಟ್ಟಿಸಿದ್ದ ಎಂದು ಹೇಳಲಾಗಿದೆ.
ANI ಸುದ್ದಿ ಸಂಸ್ಥೆಯ ಪ್ರಕಾರ, ಯಾವುದೇ ಮಾನ್ಯತೆ ಹೊಂದಿದ ವೈದ್ಯಕೀಯ ವಿದ್ಯಾರ್ಹತೆ ಹೊಂದಿಲ್ಲದಿದ್ದರೂ, ಆರೋಪಿ ಯಾದವ್ ತಾನು ಉದ್ಯೋಗ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಹಲವಾರು ಹೃದಯ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದ್ದ ಎಂದು ಹೇಳಲಾಗಿದೆ. ಆತನ ನಕಲಿ ವೈದ್ಯಕೀಯ ವಿಧಾನಗಳಿಂದ ಇಲ್ಲಿಯವರೆಗೆ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದರೂ, ಸಾವಿನ ನೈಜ ಸಂಖ್ಯೆ ಇದಕ್ಕಿಂತ ಗಮನಾರ್ಹ ಪ್ರಮಾಣದಲ್ಲಿ ಅಧಿಕವಿರಬಹುದು ಎಂದು ಸ್ಥಳೀಯ ಪ್ರಾಧಿಕಾರಗಳು ಹಾಗೂ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಆದರೆ, ಬ್ರಿಟನ್ ಮೂಲದ ವೈದ್ಯನೆಂಬ ಯಾದವ್ ಸೋಗಿನ ಕುರಿತು ಇದೇ ಪ್ರಥಮ ಬಾರಿಯೇನೂ ಅನುಮಾನ ವ್ಯಕ್ತವಾಗಿಲ್ಲ. ಬ್ರಿಟಿಷ್ ಹೃದಯ ತಜ್ಞ ಜಾನ್ ಕ್ಯಾಮ್ ಹೆಸರನ್ನು ಬಳಸಿಕೊಂಡು, ಕೋಮುವಾದಿ ಮಾಹಿತಿಗಳನ್ನು ಹರಡುತ್ತಿದ್ದ ಟ್ವಿಟರ್ (ಇದೀಗ ಎಕ್ಸ್) ಖಾತೆಯೊಂದರ ಕುರಿತು ಜುಲೈ 2023ರಲ್ಲಿ ಸತ್ಯಶೋಧಕ ಹಾಗೂ ಆಲ್ಟ್ ನ್ಯೂಸ್ ಸಹ ಸ್ಥಾಪಕ ಮುಹಮ್ಮದ್ ಝುಬೈರ್ ಬಯಲು ಮಾಡಿದ್ದರು. ಝುಬೇರ್ ಅವರ ತನಿಖೆಯಿಂದಾಗಿ, ಆ ಖಾತೆಯ ಹಿಂದೆ ನಿಜವಾಗಿಯೂ ಇದ್ದ ವ್ಯಕ್ತಿ ನರೇಂದ್ರ ವಿಕ್ರಮಾದಿತ್ಯ ಯಾದವ್ ಎಂಬ ಮಾಹಿತಿ ಬಹಿರಂಗಗೊಂಡಿತ್ತು.
ಫ್ರಾನ್ಸ್ ನಲ್ಲಿ ಗಲಭೆಗಳನ್ನು ನಿಯಂತ್ರಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಅಲ್ಲಿಗೆ ರವಾನಿಸಬೇಕು ಎಂಬ ಪ್ರಚೋದನಕಾರಿ ರಾಜಕೀಯ ಪೋಸ್ಟ್ ಅನ್ನು ಮಾಡುವ ಮೂಲಕ, ನಕಲಿ ವೈದ್ಯ ನರೇಂದ್ರ ಯಾದವ್ ಸ್ಪಷ್ಟವಾಗಿ ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದ. ಇದಕ್ಕೆ ಸಂಬಂಧಿಸಿದಂತೆ, ಹಳೆಯ ವಂಚನೆಗಳೊಂದಿಗೆ ಹಾಗೂ ಸೋಗಿನ ಪ್ರಕರಣಗಳೊಂದಿಗೆ ನರೇಂದ್ರ ಯಾದವ್ ಖಾತೆ ಹೊಂದಿರುವ ಸಂಬಂಧದ ಕುರಿತು ಮುಹಮ್ಮದ್ ಝುಬೈರ್ ವಿಸ್ತೃತ ಪೋಸ್ಟ್ ಗಳನ್ನು ಹಂಚಿಕೊಂಡಿದ್ದರು. ಆದರೆ, ಸಾರ್ವಜನಿಕ ಬಯಲಿನ ನಂತರವೂ, ನರೇಂದ್ರ ಯಾದವ್ ಹೃದಯ ತಜ್ಞ ಎಂದು ಹೇಳಿಕೊಂಡು ತನ್ನ ಕಾರ್ಯಾಚರಣೆಯನ್ನು ನಿರಾತಂಕವಾಗಿ ಮುಂದುವರಿಸಿದ್ದು ವಿಶೇಷವಾಗಿದೆ.
ತಮ್ಮ ಗುರುತನ್ನು ಆನ್ ಲೈನ್ ನಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಲಂಡನ್ ನ ಸೇಂಟ್ ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ನೈಜ ಹೃದ್ರೋಗ ಶಾಸ್ತ್ರದ ಗೌರವ ಪ್ರಾಧ್ಯಾಪಕರಾಗಿರುವ ಪ್ರೊ. ಜಾನ್ ಕ್ಯಾಮ್ ಕೂಡಾ ಸ್ಪಷ್ಟಪಡಿಸಿದ್ದರು. ಆದರೆ, ನಕಲಿ ವೈದ್ಯನು ತನ್ನ ಗುರುತನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದರಿಂದಾಗಿ, ಈ ವಿಷಯವು ಮುಹಮ್ಮದ್ ಝುಬೈರ್ ವಿರುದ್ಧ ಕಾನೂನು ಹೋರಾಟದ ಬೆದರಿಕೆಗೂ ಕಾರಣವಾಗಿತ್ತು.
ಇತ್ತೀಚಿನ ಮಾಹಿತಿಗಳ ಪ್ರಕಾರ, ದಾಮೋಹ್ ನ ಕ್ರೈಸ್ಟ್ ಮಿಶನರಿ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಏಳು ರೋಗಿಗಳ ಸಾವಿನ ಪ್ರಕರಣದಲ್ಲಿ ನರೇಂದ್ರ ಯಾದವ್ ಹೆಸರು ಕೇಳಿ ಬಂದಿದೆ. ಹಲವಾರು ಪ್ರಕರಣಗಳು ಅಧಿಕೃತವಾಗಿ ವರದಿಯಾಗದೆ ಇರುವುದರಿಂದ, ನೈಜ ಸಾವಿನ ಸಂಖ್ಯೆ ಇನ್ನೂ ಅಧಿಕವಾಗಿರುವ ಸಾಧ್ಯತೆ ಇದೆ ಎಂದು ವಕೀಲ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ದೀಪಕ್ ತಿವಾರಿ ಹೇಳಿದ್ದಾರೆ.
“ನರೇಂದ್ರ ಯಾದವ್ ಚಿಕಿತ್ಸೆಯ ಬಳಿಕ ಬದುಕುಳಿದ ರೋಗಿಗಳ ಸಂಬಂಧಿಕರು ನನ್ನ ಬಳಿಗೆ ಬಂದು, ಘಟನೆಯ ಕುರಿತು ತಿಳಿಸಿದರು. ಸಂತ್ರಸ್ತರೊಬ್ಬರು ತಮ್ಮ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ನಕಲಿ ವೈದ್ಯ ನರೇಂದ್ರ ಯಾದವ್ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲು ಸಜ್ಜಾಗಿದ್ದ. ಆದರೆ, ಆತನ ಬಗ್ಗೆ ಅನುಮಾನಗೊಂಡ ಅವರು, ತಮ್ಮ ತಂದೆಯನ್ನು ಜಬಲ್ಪುರ್ ಗೆ ಕರೆದೊಯ್ದಿದ್ದರು. ಈ ನಕಲಿ ವೈದ್ಯ ಅಲ್ಲಿನ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಹಾಗಾಗಿ ನಮಗೆ ತಿಳಿಯಿತು” ಎಂದು ತಿವಾರಿ ಹೇಳಿದ್ದಾರೆ.
ಆರೋಪಿ ನರೇಂದ್ರ ಯಾದವ್ ವಿರುದ್ಧ ಹೈದರಾಬಾದ್ ನಲ್ಲಿ ಹಳೆಯ ಕ್ರಿಮಿನಲ್ ಪ್ರಕರಣವೊಂದು ಬಾಕಿಯಿದ್ದು, ಆತ ಅಲ್ಲಿನ ಆಸ್ಪತ್ರೆಗೆ ಯಾವುದೇ ಮಾನ್ಯತೆ ಹೊಂದಿದ ಗುರುತಿನ ದಾಖಲೆಗಳನ್ನು ಒದಗಿಸುವಲ್ಲಿ ವಿಫಲಗೊಂಡಿದ್ದ ಎಂದೂ ಅವರು ಆರೋಪಿಸಿದ್ದಾರೆ.
ಆದರೆ, ಆರೋಪಿ ನರೇಂದ್ರ ಯಾದವ್ ಉದ್ಯೋಗ ನಿರ್ವಹಿಸುತ್ತಿದ್ದ ಆಸ್ಪತ್ರೆಯು ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ ಸರಕಾರಿ ನೆರವನ್ನು ಪಡೆಯುತ್ತಿದೆ ಎಂಬ ಸಂಗತಿ ಬಯಲಾದ ನಂತರ, ಈ ವಿವಾದ ಮತ್ತಷ್ಟು ತೀವ್ರಗೊಂಡಿತ್ತು.
ಸರಕಾರಿ ಅನುದಾನಿತ ಆಸ್ಪತ್ರೆಯೊಂದರಲ್ಲಿ ನಕಲಿ ವೈದ್ಯನೊಬ್ಬ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸುತ್ತಿದ್ದಾನೆ ಎಂಬ ಕುರಿತು ನಾವು ದೂರೊಂದನ್ನು ಸ್ವೀಕರಿಸಿದ್ದೇವೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯೆ ಪ್ರಿಯಾಂಕಾ ಕಾನೂಂಗೊ ದೃಢಪಡಿಸಿದ್ದಾರೆ.
“ಆಸ್ಪತ್ರೆಯು ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಸಂಬಂಧ ಹೊಂದಿದೆ ಹಾಗೂ ಸರಕಾರದ ಹಣವನ್ನು ಪಡೆಯುತ್ತಿದೆ ಎಂದು ನಮಗೆ ತಿಳಿದು ಬಂದಿದೆ. ಇದು ಗಂಭೀರ ವಿಷಯವಾಗಿದ್ದು, ನಾವಿದನ್ನು ಗಮನಕ್ಕೆ ತೆಗೆದುಕೊಂಡು, ತನಿಖೆಗೆ ಚಾಲನೆ ನೀಡಿದ್ದೇವೆ” ಎಂದು ಅವರು ಹೇಳಿದ್ದಾರೆ.
ವಿದೇಶಿ ಹೃದಯ ತಜ್ಞ ಎಂಬ ಸೋಗು ಹಾಕಿದ್ದ ನರೇಂದ್ರ ಯಾದವ್ ನ ಅಸಲೀಯತ್ತು ಮುಂಚಿತವಾಗಿಯೇ ಸಾರ್ವಜನಿಕವಾಗಿ ಬಯಲಾಗಿದ್ದರೂ, ಆತನ ಹಿನ್ನೆಲೆಯ ಪರಿಶೀಲನೆಯಲ್ಲಿ ಗಂಭೀರ ಲೋಪವಾಗಿರುವುದು, ವಿಶೇಷವಾಗಿ ಸರಕಾರಿ ನೆರವನ್ನು ಪಡೆಯುತ್ತಿರುವ ಆಸ್ಪತ್ರೆಯೊಂದರಲ್ಲಿ ಆಗಿರುವುದರತ್ತ ಈ ಪ್ರಕರಣ ಬೊಟ್ಟು ಮಾಡಿದೆ. 2023ರಲ್ಲಿ ಯಾವುದು ಸಾಮಾಜಿಕ ಮಾಧ್ಯಮ ವಂಚನೆ ಪ್ರಕರಣವಾಗಿ ಪ್ರಾರಂಭವಾಗಿತ್ತೊ, ಅದೀಗ ಹಲವು ಸಾವುಗಳಿಗೆ ಕಾರಣವಾಗಿರುವ ಕ್ರಿಮಿನಲ್ ವೈದ್ಯಕೀಯ ಹಗರಣವಾಗಿ ರೂಪಾಂತರಗೊಂಡಿದೆ.