ಗೋವಾ: ಇಸ್ರೇಲ್ ನ ಮಾದಕ ವಸ್ತು ಮಾರಾಟಗಾರನ ಬಂಧನ
Update: 2025-04-05 21:20 IST

ಸಾಂದರ್ಭಿಕ ಚಿತ್ರ | PC : freepik.com
ಪಣಜಿ: ಗೋವಾ ಪೊಲೀಸರು ಇಸ್ರೇಲ್ ನ ಮಾದಕ ವಸ್ತು ಮಾರಾಟಗಾರ ಯಾನಿವ್ ಬೆನೈಮ್ ಆಲಿಯಾಸ್ ಅಟಾಲಾನನ್ನು ಆತನ ನಿವಾಸದಿಂದ ಬಂಧಿಸಿದ್ದಾರೆ ಹಾಗೂ ಆತನಿಂದ ಚರಸ್, ಕೊಕೈನ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಗೋವಾದಲ್ಲಿ ಪೊಲೀಸರು-ರಾಜಕಾರಣಿಗಳು-ಮಾದಕ ದ್ರವ್ಯ ಜಾಲದ ನಡುವಿನ ನಂಟನ್ನು ಬಹಿರಂಗಪಡಿಸುವ ಹೇಳಿಕೆ ನೀಡಿದ ಬಳಿಕ 2010ರಲ್ಲಿ ಅಟಾಲಾ ಸುದ್ದಿಯಾಗಿದ್ದ.
ಮಾದಕ ದ್ರವ್ಯ ನಿಗ್ರಹ ಘಟಕ ಶುಕ್ರವಾರ ರಾತ್ರಿ ಉತ್ತರ ಗೋವಾದ ಸಿಯೋಲಿಮ್ ಗ್ರಾಮದಲ್ಲಿರುವ ಅಟಾಲಾನ ನಿವಾಸದ ಮೇಲೆ ದಾಳಿ ನಡೆಸಿದೆ ಹಾಗೂ ಒಟ್ಟು 9 ಲಕ್ಷ ರೂ.ಗೂ ಅಧಿಕ ಮೌಲ್ಯದ 110 ಗ್ರಾಂ ಚರಸ್ ಹಾಗೂ 50 ಗ್ರಾಮ್ ಕೊಕೇನ್ ಅನ್ನು ವಶಪಡಿಸಿಕೊಂಡಿದೆ.
ಅಟಾಲಾನ ವಿರುದ್ಧ ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ ಆತನನ್ನು ಬಂಧಿಸಲಾಗಿದೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.