‘ಎಂಪುರಾನ್’ ಸಹ ನಿರ್ಮಾಪಕ ಗೋಕುಲಮ್ ಕಟ್ಟಡಗಳಿಂದ 1.5 ಕೋಟಿ ರೂ. ವಶ: ಈಡಿ

Update: 2025-04-05 21:11 IST
‘ಎಂಪುರಾನ್’ ಸಹ ನಿರ್ಮಾಪಕ ಗೋಕುಲಮ್ ಕಟ್ಟಡಗಳಿಂದ 1.5 ಕೋಟಿ ರೂ. ವಶ: ಈಡಿ

 ಗೋಕುಲಮ್ ಗೋಪಾಲನ್‌ | PC : indianexpress.com

  • whatsapp icon

ಹೊಸದಿಲ್ಲಿ: ಅಗಾಧ ಯಶಸ್ಸು ಕಂಡಿರುವ ಮಲಯಾಳಮ್ ಚಿತ್ರ ‘ಎಲ್‌2: ಎಂಪುರಾನ್’ನ ಸಹನಿರ್ಮಾಪಕ ಗೋಕುಲಮ್ ಗೋಪಾಲನ್‌ ರಿಗೆ ಸಂಬಂಧಿಸಿದ ಕಟ್ಟಡಗಳಿಂದ ಶುಕ್ರವಾರ 1.5 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಅನುಷ್ಠಾನ ನಿರ್ದೇಶನಾಲಯ (ಈಡಿ) ತಿಳಿಸಿದೆ. ಗೋಪಾಲನ್‌ ರ ವ್ಯವಹಾರಗಳ ಬಗ್ಗೆ ತನಿಖೆ ಮುಂದುವರಿಯುತ್ತಿದೆ ಎಂದು ಅದು ಹೇಳಿದೆ.

ಕೊಝಿಕ್ಕೋಡ್‌ನಲ್ಲಿರುವ ಗೋಕುಲಮ್ ಮಾಲ್ ಮತ್ತು ಶ್ರೀ ಗೋಕುಲಮ್ ಚಿಟ್ ಆ್ಯಂಡ್ ಫೈನಾನ್ಸ್ ಕೊ ಲಿಮಿಟೆಡ್‌ ನ ಕಚೇರಿಗಳು ಹಾಗೂ ಕೇರಳ ಮತ್ತು ತಮಿಳುನಾಡಿನಲ್ಲಿರುವ ಸಂಬಂಧಿತ ಇತರ ಕಟ್ಟಡಗಳು ಸೇರಿದಂತೆ ಗೋಪಾಲನ್‌ರಿಗೆ ಸಂಬಂಧಿಸಿದ ಕಟ್ಟಡಗಳಲ್ಲಿ ಅನುಷ್ಠಾನ ನಿರ್ದೇಶನಾಲಯವು ಶೋಧ ಕಾರ್ಯಾಚರಣೆ ನಡೆಸಿದೆ.

ಕಂಪೆನಿಯು ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮ)ಯನ್ನು ಉಲ್ಲಂಘಿಸಿದೆ ಎಂಬ ಆರೋಪಗಳ ಆಧಾರದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

‘‘ಗೋಕುಲಮ್ ಗೋಪಾಲನ್ ಮತ್ತು ಅವರ ಕಂಪೆನಿ ಶ್ರೀ ಗೋಪಾಲನ್ ಚಿಟ್ ಆ್ಯಂಡ್ ಫೈನಾನ್ಸ್ ಕೊ ಲಿಮಿಟೆಡ್‌ ಗೆ ಸಂಬಂಧಿಸಿದ ಫೆಮ ಪ್ರಕರಣದಲ್ಲಿ ಎಪ್ರಿಲ್ 4ರಂದು ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಕಾರ್ಯಾಚರಣೆಗಳ ವೇಳೆ 1.5 ಕೋಟಿ ರೂ. ಮೊತ್ತವನ್ನು ವಶಪಡಿಸಿಕೊಳ್ಳಲಾಯಿತು’’ ಎಂದು ಅನುಷ್ಠಾನ ನಿರ್ದೇಶನಾಲಯವು ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮೋಹನ್ ಲಾಲ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ ‘ಎಲ್‌2: ಎಂಪುರಾನ್’ಗೆ ಸಂಬಂಧಿಸಿ ವಿವಾದಗಳು ತಲೆಯೆತ್ತಿದ ಬೆನ್ನಿಗೇ ಕೇಂದ್ರ ಸರಕಾರಕ್ಕೆ ಒಳಪಟ್ಟ ಅನುಷ್ಠಾನ ನಿರ್ದೇಶನಾಲಯವು ಈ ದಾಳಿಗಳನ್ನು ನಡೆಸಿದೆ. ಚಿತ್ರದಲ್ಲಿ ಗೋಧ್ರಾ ಗಲಭೆಯನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂಬುದಾಗಿ ಬಿಜೆಪಿ ಸೇರಿದಂತೆ ಬಲಪಂಥೀಯ ಸಂಘಟನೆಗಳು ಆರೋಪಿಸಿವೆ. ಗೋಧ್ರಾ ಗಲಭೆಯ ವಾಸ್ತವಾಂಶಗಳನ್ನು ಚಿತ್ರದಲ್ಲಿ ತಿರುಚಲಾಗಿದೆ ಎಂದು ಸಂಘ ಪರಿವಾರ ಹೇಳಿದೆ.

1,000 ಕೋಟಿ ರೂ. ಮೊತ್ತದ ಫೆಮ ಉಲ್ಲಂಘನೆ ನಡೆದಿದ್ದು, ಅದಕ್ಕಾಗಿ ಗೋಪಾಲನ್ ಮತ್ತು ಅವರ ಚಿತ್ರಗಳ ಬಗ್ಗೆ ತನಿಖೆ ತನಿಖೆ ಮಾಡಲಾಗುತ್ತಿದೆ ಎಂದು ಈಡಿ ಹೇಳಿದೆ.

*ನಿರ್ದೇಶಕ ಪೃಥ್ವಿರಾಜ್‌ ಗೆ ಆದಾಯ ತೆರಿಗೆ ಇಲಾಖೆ ನೋಟಿಸ್

ಮಲಯಾಳಮ್ ಬ್ಲಾಕ್‌ಬಸ್ಟರ್ ಚಿತ್ರ ‘ಎಲ್‌2: ಎಂಪುರಾನ್’ನ ಸಹ ನಿರ್ಮಾಪಕ ಗೋಕುಲಮ್ ಗೋಪಾಲನ್‌ಗೆ ಸೇರಿದ ಕಟ್ಟಡಗಳಲ್ಲಿ ಅನುಷ್ಠಾನ ನಿರ್ದೇಶನಾಲಯವು ಶೋಧ ಕಾರ್ಯಾಚರಣೆ ನಡೆಸಿದ ಒಂದು ದಿನದ ಬಳಿಕ, 2022ರಲ್ಲಿ ಬಿಡುಗಡೆಗೊಂಡಿರುವ ಚಿತ್ರಗಳಿಂದ ಪಡೆದಿರುವ ಆದಾಯಕ್ಕೆ ಸಂಬಂಧಿಸಿ ವಿವರಗಳನ್ನು ನೀಡುವಂತೆ ಕೇಂದ್ರ ಸರಕಾರದ ಒಡೆತನದ ಆದಾಯ ತೆರಿಗೆ ಇಲಾಖೆಯು ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್‌ರಿಗೆ ನೋಟಿಸ್ ಜಾರಿಗೊಳಿಸಿದೆ.

ಜನ ಗಣ ಮನ, ಕಡುವ ಮತ್ತು ಗೋಲ್ಡ್- ಈ ಮೂರು ಚಿತ್ರಗಳಿಂದ ಪಡೆದಿರುವ ಆದಾಯದ ವಿವರಗಳನ್ನು ಸಲ್ಲಿಸುವಂತೆ ತನ್ನ ನೋಟಿಸ್‌ನಲ್ಲಿ ಆದಾಯ ತೆರಿಗೆ ಇಲಾಖೆಯು ಎಂಪುರಾನ್ ಚಿತ್ರದ ನಿರ್ದೇಶಕರೂ ಆಗಿರುವ ಸುಕುಮಾರನ್‌ರಿಗೆ ಸೂಚಿಸಿದೆ.

ಪೃಥ್ವಿರಾಜ್ ಸುಕುಮಾರನ್ ಒಡೆತನದ ಚಿತ್ರ ನಿರ್ಮಾಣ ಸಂಸ್ಥೆ ‘ಪೃಥ್ವಿರಾಜ್ ಪ್ರೊಡಕ್ಷನ್ಸ್’ ಈ ಚಿತ್ರಗಳ ಸಹ ನಿರ್ಮಾಪಕನಾಗಿದೆ.

ಎಂಪುರಾನ್ ಬಿಡುಗಡೆಗೊಂಡ ಎರಡು ದಿನಗಳ ಬಳಿಕ, ಚಿತ್ರದಲ್ಲಿನ 2002ರ ಗೋಧ್ರಾ ಗಲಭೆಯ ದೃಶ್ಯಗಳು ವಿವಾದವಾದಾಗ ಮಾರ್ಚ್ 29ರಂದು ಆದಾಯ ತೆರಿಗೆ ಇಲಾಖೆಯು ಅವರಿಗೆ ನೋಟಿಸ್ ನೀಡಿದೆ ಎನ್ನಲಾಗಿದೆ.

ಆದರೆ, ಈ ನೋಟಿಸನ್ನು ‘‘ಸಾಮಾನ್ಯ ವಿಧಿವಿಧಾನ’’ದ ಭಾಗವಾಗಿ ಹಾಗೂ 2022ರಲ್ಲಿ ನಟನಿಗೆ ಸಂಬಂಧಿಸಿದ ಕಟ್ಟಡಗಳಲ್ಲಿ ನಡೆದ ಶೋಧ ಕಾರ್ಯಾಚರಣೆಯ ಮುಂದಿನ ಹಂತವಾಗಿ ಕಳುಹಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ನೋಟಿಸ್‌ ಗೆ ಉತ್ತರಿಸಲು ನಟನಿಗೆ ಎಪ್ರಿಲ್ 29ರವರೆಗೆ ಕಾಲಾವಕಾಶ ನೀಡಲಾಗಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News