ಆತ್ಮಹತ್ಯೆ ಮಾಡಿಕೊಳ್ಳದಂತೆ ತಹವ್ವುರ್ ರಾಣಾ ಮೇಲೆ ಕಣ್ಗಾವಲು

PC: x.com/DDNewslive
ಹೊಸದಿಲ್ಲಿ: ಮುಂಬೈ ದಾಳಿ ಪ್ರಕರಣದ ಸೂತ್ರಧಾರನಲ್ಲೊಬ್ಬನಾದ ತಹವ್ವುರ್ ರಾಣಾ (64) ಅಮೆರಿಕದಿಂದ ಭಾರತಕ್ಕೆ ಗಡಿಪಾರಾದ ಬಳಿಕ ಬಿಗಿಭದ್ರತೆಯ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ಕೇಂದ್ರ ಕಚೇರಿಯ ಜೈಲಿನಲ್ಲಿರಿಸಿದ್ದು, ಆತ ಆತ್ಮಹತ್ಯೆ ಮಾಡಿಕೊಳ್ಳದಂತೆ ಕಣ್ಗಾವಲು ಇರಿಸಲಾಗಿದೆ. ಎನ್ಐಎ ನ್ಯಾಯಾಲಯ ನಿನ್ನೆ ರಾಣಾನನ್ನು 18 ದಿನಗಳ ಅವಧಿಗೆ ಭಯೋತ್ಪಾದನಾ ನಿಗ್ರಹ ಏಜೆನ್ಸಿಯ ವಶಕ್ಕೆ ನೀಡಿತ್ತು.
ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ರಾಣಾನನ್ನು ಗುರುವಾರ ಸಂಜೆ ಬಿಗಿಭದ್ರತೆಯಲ್ಲಿ ಭಾರತಕ್ಕೆ ಕರೆ ತರಲಾಗಿದೆ. ಈತನ ಮೇಲೆ ದಿನದ 24 ಗಂಟೆಯೂ ಮಾನವ ಮತ್ತು ಸಿಸಿಟಿವಿ ಕಣ್ಗಾವಲು ಇಡಲಾಗಿದೆ. ಲೋಧಿ ರಸ್ತೆಯಲ್ಲಿರುವ ಎನ್ಐಎ ಕೇಂದ್ರ ಕಚೇರಿಗೆ ಬಹು ಹಂತದ ಬಿಗಿಭದ್ರತೆ ಒದಗಿಸಲಾಗಿದೆ. "ರಾಣಾನನ್ನು ನೆಲಮಹಡಿಯ 14 * 14 ಸೆಲ್ ನಲ್ಲಿ ಇರಿಸಲಾಗಿದೆ. ಆತನಿಗೆ ಬರೆಯಲು ಕೇವಲ ಮೆದು ತುದಿಯ ಪೆನ್ ಬಳಸಲು ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ಯಾವುದೇ ಹಾನಿ ಮಾಡಿಕೊಳ್ಳದಂತೆ ಎಚ್ಚರ ವಹಿಸಲಾಗಿದೆ" ಎಂದು ಮೂಲಗಳು ಹೇಳಿವೆ.
ಏತನ್ಮಧ್ಯೆ ಎನ್ಐಎ ಶುಕ್ರವಾರ ರಾಣಾ ವಿಚಾರಣೆಯನ್ನು ಆರಂಭಿಸಿದ್ದು, ಭಯೋತ್ಪಾದಕ ದಾಳಿಯ ಬಗೆಗಿನ ವಿಸ್ತೃತ ಸಂಚನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಪ್ರಶ್ನಿಸುತ್ತಿದೆ. ಐಎಸ್ಐ ಜತೆಗಿನ ಆತನ ಸಂಬಂಧದ ಜತೆಗೆ, ಭಾರತದ ಸ್ಲೀಪರ್ ಸೆಲ್ ಗಳಲ್ಲಿ ಆತನ ಪಾಲ್ಗೊಳ್ಳುವಿಕೆ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಆತನ ಸಹಚರ ಡೇವಿಡ್ ಕೋಲ್ಮನ್ ಹೆಡ್ಲಿ ಸಂಪರ್ಕದ ತಾಣಗಳ ಬಗ್ಗೆ ತನಿಖೆ ಕೇಂದ್ರೀಕರಿಸಲಾಗಿದೆ. ಪುಷ್ಕರ್, ಗೋವಾ, ದೆಹಲಿ ಮತ್ತು ಇತರ ಸ್ಥಳಗಳಲ್ಲಿ ಹೆಡ್ಲಿ ಸ್ಲೀಪರ್ ಸೆಲ್ ಗಳನ್ನು ನಿಯೋಜಿಸಿದ್ದ ಎನ್ನಲಾಗಿದೆ.