ವಕ್ಫ್ ಮಸೂದೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ: ತೇಜಸ್ವಿ ಯಾದವ್

ತೇಜಸ್ವಿ ಯಾದವ್| PC : ANI
ಪಾಟ್ನಾ: ಆರ್‌ಜೆಡಿ ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ವಕ್ಫ್ ತಿದ್ದುಪಡಿ ಮಸೂದೆ, 2025ನ್ನು ಅನುಷ್ಠಾನಕ್ಕೆ ತರಲಾಗುವುದಿಲ್ಲ ಹಾಗೂ ‘‘ಅದನ್ನು ಕಸದ ಬುಟ್ಟಿಗೆ ಎಸೆಯಲಾಗುವುದು’’ ಎಂದು ಪಕ್ಷದ ನಾಯಕ ತೇಜಸ್ವಿ ಯಾದವ್ ಶನಿವಾರ ಹೇಳಿದ್ದಾರೆ.
ಈ ಮಸೂದೆಯನ್ನು ಅಸಾಂವಿಧಾನಿಕ ಎಂಬುದಾಗಿ ಬಣ್ಣಿಸಿದ ಬಿಹಾರ ವಿಧಾನಸಭೆಯ ಪ್ರತಿಪಕ್ಷ ನಾಯಕರೂ ಆಗಿರುವ ಯಾದವ್, ದೇಶವನ್ನು ಬಾಧಿಸುತ್ತಿರುವ ಗಂಭೀರ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಆಡಳಿತಾರೂಢ ಬಿಜೆಪಿಯು ವಿಭಜನವಾದಿ ರಾಜಕೀಯವನ್ನು ಮಾಡುತ್ತಿದೆ ಎಂದು ಆರೋಪಿಸಿದರು.
‘‘ವಕ್ಫ್ ತಿದ್ದುಪಡಿ ಮಸೂದೆಯು ಅಸಾಂವಿಧಾನಿಕವಾಗಿದೆ. ಅದು ಭಾರತೀಯ ಸಂವಿಧಾನದ 26ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಬಿಜೆಪಿಯು ಕೋಮು ವಿಭಜನೆಯ ರಾಜಕೀಯದಲ್ಲಿ ತೊಡಗಿದೆ. ಅದು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುತ್ತಾ ನೈಜ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ’’ ಎಂದು ಯಾದವ್ ಹೇಳಿದರು.
‘‘ಅವರು ನಾಗಪುರದ ಕಾನೂನುಗಳನ್ನು (ಆರ್‌ಎಸ್‌ಎಸ್ ಸಿದ್ಧಾಂತ) ದೇಶಾದ್ಯಂತ ಜಾರಿಗೊಳಿಸಲು ಹೊರಟಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಸಂವಿಧಾನ ವಿರೋಧಿಗಳು. ನಾವು ಜಾತ್ಯತೀತತೆ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಹೋರಾಡುತ್ತಿರುವವರು’’ ಎಂದು ಅವರು ನುಡಿದರು.
ಈ ಮಸೂದೆಯ ಹಿಂದಿನ ಬಿಜೆಪಿಯ ನಿಜವಾದ ಉದ್ದೇಶ ಮುಸ್ಲಿಮರು, ದಲಿತರು ಮತ್ತು ಹಿಂದುಳಿದ ಸಮುದಾಯಗಳನ್ನು ಮುಖ್ಯವಾಹಿನಿಯಿಂದ ಬೇರ್ಪಡಿಸುವುದಾಗಿದೆ ಎಂದು ಅವರು ಆರೋಪಿಸಿದರು.