ಉತ್ತರ ಪ್ರದೇಶ | 800 ರೂ. ಶುಲ್ಕ ಪಾವತಿಸಲು ಬಾಕಿಯಿರಿಸಿದ್ದಕ್ಕೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಣೆ; 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ | PC: pexels
ಪ್ರತಾಪ್ ಗಢ: ಶುಲ್ಕ ಪಾವತಿಸದೆ ಪರೀಕ್ಷೆಗೆ ಹಾಜರಾಗಲು ಕಾಲೇಜಿನ ಆಡಳಿತ ಮಂಡಳಿ ಅನುಮತಿಸದ ಹಿನ್ನೆಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ ಪ್ರತಾಪ್ ಗಢ ಜಿಲ್ಲೆಯಲ್ಲಿ ನಡೆದಿದೆ.
800 ರೂ. ಶುಲ್ಕ ಪಾವತಿಸಲು ಬಾಕಿ ಇದ್ದುದರಿಂದ ರಿಯಾ ಪ್ರಜಾಪತಿ (17)ಗೆ ಕಮಲಾ ಶರಣ್ ಯಾದವ್ ಇಂಟರ್ ಕಾಲೇಜು ಪರೀಕ್ಷೆ ಪ್ರವೇಶ ಪತ್ರ ನೀಡಲಿಲ್ಲ ಎಂದು ಆಕೆಯ ತಾಯಿ ಪೂನಮ್ ದೇವಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪುತ್ರಿ ಶನಿವಾರ ಪರೀಕ್ಷೆಗೆ ಹಾಜರಾಗಲು ತೆರಳಿದಾಗ ಕಾಲೇಜಿನ ಮ್ಯಾನೇಜರ್ ಸಂತೋಷ್ ಕುಮಾರ್ ಯಾದವ್, ಪ್ರಾಂಶುಪಾಲ ರಾಜ್‌ಕುಮಾರ್ ಯಾದವ್, ಸಿಬ್ಬಂದಿ ದೀಪಕ್ ಸರೋಜ್, ಜವಾನ ಧನಿರಾಮ್ ಹಾಗೂ ಅಧ್ಯಾಪಕರೊಬ್ಬರಿಂದ ಅವಮಾನಕ್ಕೆ ಒಳಗಾಗಿದ್ದಳು ಎಂದು ಪೂನಮ್ ದೇವಿ ಆರೋಪಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಾಲೇಜು ಆಡಳಿತ ಮಂಡಳಿ ರಿಯಾ ಪ್ರಜಾಪತಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಆಕೆಯನ್ನು ಮನೆಗೆ ಹಿಂದೆ ಕಳುಹಿಸಿತು ಎಂದು ಪೂನಮ್ ದೇವಿ ಅವರ ದೂರನ್ನು ಉಲ್ಲೇಖಿಸಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಪೂರ್ವ) ದುರ್ಗೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಅವಮಾನದಿಂದ ನೊಂದ ರಿಯಾ ತನ್ನ ಮನೆಗೆ ಹಿಂದಿರುಗಿದ್ದಾಳೆ ಹಾಗೂ ಕೊಠಡಿಗೆ ತೆರಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪುತ್ರಿಯ ಭವಿಷ್ಯವನ್ನು ಹಾಳು ಮಾಡುವುದಾಗಿ ಕಾಲೇಜಿನ ಸಿಬ್ಬಂದಿ ಬೆದರಿಕೆ ಒಡ್ಡಿದ್ದರು. ಇದು ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಯಿತು ಎಂದು ಕೂಡ ಪೂನಮ್ ದೇವಿ ತನ್ನ ದೂರಿನಲ್ಲಿ ಆರೋಪಿಸಿರುವುದಾಗಿ ಅವರು ಹೇಳಿದ್ದಾರೆ.
ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.