ಉದ್ಯೋಗಿಗಳು ಅಂಗಾಂಗ ದಾನಕ್ಕಾಗಿ 42 ದಿನಗಳ ವಿಶೇಷ ಸಾಂದರ್ಭಿಕ ರಜೆಗೆ ಅರ್ಹರು: ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಕೇಂದ್ರ ಸರಕಾರದ ಉದ್ಯೋಗಿಗಳು ಅಂಗಾಂಗ ದಾನ ಮಾಡಲು ಗರಿಷ್ಠ 42 ದಿನಗಳ ವಿಶೇಷ ಸಾಂದರ್ಭಿಕ ರಜೆಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಸಹಾಯಕ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ಅವರು ಬುಧವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದರು.
ದಾನಿಯ ಅಂಗವನ್ನು ತೆಗೆಯಲು ಶಸ್ತ್ರಚಿಕಿತ್ಸೆ ವಿಧಾನ ಯಾವುದೇ ಆಗಿರಲಿ,ಆರ್‌ಎಂಪಿ/ವೈದ್ಯರ ಶಿಫಾರಸಿನ ಮೇರೆಗೆ ವಿಶೇಷ ಸಾಂದರ್ಭಿಕ ರಜೆಯ ಅವಧಿ ಗರಿಷ್ಠ 42 ದಿನಗಳಾಗಿರುತ್ತವೆ ಎಂದು 2023ರಲ್ಲಿ ಸಿಬ್ಬಂದಿ ಸಚಿವಾಲಯವು ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ.
ವಿಶೇಷ ಸಾಂದರ್ಭಿಕ ರಜೆಯನ್ನು ಸಾಮಾನ್ಯವಾಗಿ ಆಸ್ಪತ್ರೆಗೆ ದಾಖಲಾದ ಮೊದಲ ದಿನದಿಂದ ಒಂದೇ ಹಂತದಲ್ಲಿ ಪಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿರುವ ಆದೇಶವು,ಆದರೂ ಅಗತ್ಯವಿದ್ದರೆ ಆರ್‌ಎಂಪಿ ಅಥವಾ ವೈದ್ಯರ ಶಿಫಾರಸಿನ ಮೇರೆಗೆ ಶಸ್ತ್ರಚಿಕಿತ್ಸೆಗೆ ಗರಿಷ್ಠ ಒಂದು ವಾರ ಮೊದಲು ಈ ರಜಾ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಹೇಳಿದೆ.