ತನಿಖೆಗೆ ಹಾಜರಾಗಲು ಮುಂಬೈ ಪೊಲೀಸರಿಂದ ಸಮನ್ಸ್ ಪಡೆದ ಪ್ರೇಕ್ಷಕನಿಂದ ಕ್ಷಮೆ ಕೋರಿದ ಕುನಾಲ್ ಕಾಮ್ರಾ

ಕುನಾಲ್ ಕಾಮ್ರಾ | PC : X
ಮುಂಬೈ: ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ, ತನ್ನ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರಿಂದ ಸಮನ್ಸ್ ಪಡೆದಿರುವ ಬ್ಯಾಂಕ್ ಉದ್ಯೋಗಿಯೊಬ್ಬರಿಂದ ಬುಧವಾರ ಕ್ಷಮೆ ಕೋರಿದ್ದಾರೆ.
ಪೊಲೀಸರಿಂದ ಸಮನ್ಸ್ ಪಡೆದ ಬಳಿಕ, ಬ್ಯಾಂಕ್ ಉದ್ಯೋಗಿಯು ತನ್ನ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಮುಂಬೈಗೆ ಮರಳಿದ್ದಾರೆ ಎನ್ನಲಾಗಿದೆ.
ಬ್ಯಾಂಕ್ ಉದ್ಯೋಗಿಗೆ ಆಗಿರುವ ಅನಾನುಕೂಲತೆಗಾಗಿ ಕ್ಷಮೆ ಕೋರಿರುವ ಕುನಾಲ್ ಕಾಮ್ರಾ, ಅವರಿಗಾಗಿ ಭಾರತದಲ್ಲಿ ಎಲ್ಲಿಯಾದರೂ ಇನ್ನೊಂದು ಪ್ರವಾಸವನ್ನು ಏರ್ಪಡಿಸುವ ಭರವಸೆ ನೀಡಿದ್ದಾರೆ. ‘‘ನನ್ನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕಾರಣಕ್ಕಾಗಿ ನಿಮಗೆ ಆಗಿರುವ ತೊಂದರೆಗೆ ನಾನು ನಿಮ್ಮ ಕ್ಷಮೆ ಕೋರುತ್ತೇನೆ. ನಿಮಗಾಗಿ ನಾನು ಇನ್ನೊಂದು ಪ್ರವಾಸವನ್ನು ಭಾರತದಲ್ಲಿ ಎಲ್ಲಿಯಾದರೂ ಏರ್ಪಡಿಸುತ್ತೇನೆ. ದಯವಿಟ್ಟು ನನಗೆ ಇಮೇಲ್ ಮಾಡಿ’’ ಎಂದು ಕಾಮ್ರಾ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದಿದ್ದಾರೆ.
ನವೀ ಮುಂಬೈಯ 46 ವರ್ಷದ ಬ್ಯಾಂಕ್ ಉದ್ಯೋಗಿ ತಮಿಳುನಾಡು ಮತ್ತು ಕೇರಳಕ್ಕೆ 17 ದಿನಗಳ ಪ್ರವಾಸಕ್ಕೆ ಹೋಗಿದ್ದರು. ಆದರೆ, ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧದ ಪ್ರಕರಣದಲ್ಲಿ ಸಾಕ್ಷಿಯಾಗಿ ಹಾಜರಾಗುವಂತೆ ಸೂಚಿಸಿ ಮುಂಬೈ ಪೊಲೀಸರು ಅವರಿಗೆ ಸಮನ್ಸ್ ಕಳುಹಿಸಿದ್ದಾರೆ.
ಅವರು ಮಾರ್ಚ್ 21ರಂದು ತನ್ನ ಪ್ರವಾಸ ಆರಂಭಿಸಿದ್ದರು ಮತ್ತು ಎಪ್ರಿಲ್ 6ರಂದು ಮುಂಬೈಗೆ ಮರಳಬೇಕಾಗಿತ್ತು. ಆದರೆ ಪೊಲೀಸರಿಂದ ನೋಟಿಸ್ ಮತ್ತು ಕರೆಗಳನ್ನು ಸ್ವೀಕರಿಸಿದ ಬಳಿಕ ಅವರು ಸೋಮವಾರವೇ ಮರಳಬೇಕಾಯಿತು.
ಪೊಲೀಸರು ಬ್ಯಾಂಕ್ ಉದ್ಯೋಗಿಗೆ ಮಾರ್ಚ್ 28ರಂದು ಫೋನ್ ಮಾಡಿದರು ಎನ್ನಲಾಗಿದೆ. ಬಳಿಕ, ಅವರು ಮಾಚ್ 29ರಂದು ವಾಟ್ಸ್‌ಆ್ಯಪ್‌ನಲ್ಲಿ ನೋಟಿಸ್ ಸ್ವೀಕರಿಸಿದರು. ಸಿಆರ್‌ಪಿಸಿಯ 179 ವಿಧಿಯನ್ವಯ ವಿಚಾರಣೆಗಾಗಿ ಮಾರ್ಚ್ 30ರಂದು ಹಾಜರಾಗುವಂತೆ ಅವರಿಗೆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು.
ತನ್ನ ಕಾರ್ಯಕ್ರಮದ ವೇಳೆ, ಕಾಮ್ರಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಉಪಮುಖ್ಯಮಂತ್ರಿ ಏಕನಾಥ ಶಿಂದೆಗೆ ಅವಮಾನಿಸಿದ್ದಾರೆ ಎಂಬುದಾಗಿ ಅವರ ಹಿಂಬಾಲಕರು ಆರೋಪಿಸಿದ್ದಾರೆ.
‘ವೀಡಿಯೊವನ್ನು ನಾನು ಎಡಿಟ್ ಮಾಡಿರಬಹುದೆಂದು ಪೊಲೀಸರು ಹೇಳುತ್ತಿದ್ದಾರೆ!’:
‘‘ನಾನು ಪ್ರವಾಸಕ್ಕಾಗಿ ಮಾರ್ಚ್ 21ರಂದು ಮುಂಬೈಯಿಂದ ಹೊರಟಿದ್ದೆ ಹಾಗೂ ಎಪ್ರಿಲ್ 6ರಂದು ಮರಳಬೇಕಾಗಿತ್ತು. ಆದರೆ, ನಾನು ತಮಿಳುನಾಡಿನಲ್ಲಿರುವಾಗ ಪೊಲೀಸರು ಪದೇ ಪದೇ ಕರೆ ಮಾಡಿದ ಹಿನ್ನೆಲೆಯಲ್ಲಿ ನಾನು ಅರ್ಧದಲ್ಲೇ ಹಿಂದಿರುಗಬೇಕಾಯಿತು. ನಾನು ಮುಂಬೈಯಿಂದ ಹೊರಗಿದ್ದೇನೆ ಎಂದು ಹೇಳಿದಾಗ ನನಗೆ ಕರೆ ಮಾಡಿದ ಪೊಲೀಸ್ ಅಧಿಕಾರಿ ಸಂಶಯ ವ್ಯಕ್ತಪಡಿಸಿದರು ಮತ್ತು ಖರ್ಗಾರ್‌ನಲ್ಲಿರುವ ನನ್ನ ಮನೆಗೆ ಬರುವುದಾಗಿ ಬೆದರಿಸಿದರು. ಹಾಗಾಗಿ ನನ್ನ ಪ್ರವಾಸವನ್ನು ಅರ್ಧದಲ್ಲೇ ಮುಗಿಸಿ ವಾಪಸಾಗಿದ್ದೇನೆ’’ ಎಂದು ಬ್ಯಾಂಕ್ ಉದ್ಯೋಗಿ ಹೇಳಿದ್ದಾರೆ.
‘‘ನಾನು ಕಾರ್ಯಕ್ರಮದ ಟಿಕೆಟನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದೇನೆ ಎಂದು ಹೇಳಿದರೂ ಪೊಲೀಸರು ಕೇಳಲಿಲ್ಲ. ಕಾಮ್ರಾ ಚಿತ್ರೀಕರಿಸಿದ ವೀಡಿಯೊವನ್ನು ನಾನು ಎಡಿಟ್ ಮಾಡಿರಬಹುದು ಎಂದು ಅವರು ಹೇಳುತ್ತಿದ್ದಾರೆ. ತನ್ನ ಕಾರ್ಯಕ್ರಮದ ವೀಡಿಯೊವನ್ನು ಎಡಿಟ್ ಮಾಡಲು ಕಾಮಿಡಿಯನ್ ನನಗೆ ಯಾಕೆ ಕೊಡುತ್ತಾರೆ?’’ ಎಂದು ಅವರು ಪ್ರಶ್ನಿಸಿದರು.