"ನೀವು ನಮ್ಮವರೇ": ನಕ್ಸಲರಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದ ಗೃಹ ಸಚಿವ ಅಮಿತ್ ಶಾ

Update: 2025-04-05 17:01 IST
"ನೀವು ನಮ್ಮವರೇ": ನಕ್ಸಲರಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದ ಗೃಹ ಸಚಿವ ಅಮಿತ್ ಶಾ

 ಗೃಹ ಸಚಿವ ಅಮಿತ್ ಶಾ | PC : PTI 

  • whatsapp icon

ದಾಂತೆವಾಡ: ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಆದಿವಾಸಿಗಳ ಅಭಿವೃದ್ಧಿಯನ್ನು ತಡೆಯಲು ನಕ್ಸಲರಿಗೆ ಸಾಧ್ಯವಿಲ್ಲ. ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು. ನಕ್ಸಲರು ಕೊಲ್ಲಲ್ಪಟ್ಟಾಗ ಯಾರೂ ಸಂತೋಷವಾಗಿರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಛತ್ತೀಸ್‌ಗಢ ಸರಕಾರದ 'ಬಸ್ತರ್ ಪಾಂಡುಮ್' ಉತ್ಸವದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಮಾರ್ಚ್ 2026ರ ವೇಳೆಗೆ ನಕ್ಸಲ್ ಹಾವಳಿಯನ್ನು ತೊಡೆದುಹಾಕಲು ಸರಕಾರ ಬದ್ಧವಾಗಿದೆ. ಶರಣಾಗುವವರು ಮುಖ್ಯವಾಹಿನಿಯ ಭಾಗವಾಗುತ್ತಾರೆ. ಉಳಿದವರನ್ನು ಭದ್ರತಾ ಪಡೆಗಳು ನೋಡಿಕೊಳ್ಳಲಿದ್ದಾರೆ ಎಂದು ಹೇಳಿದರು.

ಬಸ್ತಾರ್‌ನಲ್ಲಿ ಬುಲೆಟ್‌ಗಳನ್ನು ಸಿಡಿಸಿದ, ಬಾಂಬ್‌ಗಳನ್ನು ಸ್ಪೋಟಿಸಿದ ದಿನಗಳು ಕಳೆದಿವೆ. ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಸೇರಬೇಕೆಂದು ನಾನು ಒತ್ತಾಯಿಸುತ್ತೇನೆ. ನೀವು ನಮ್ಮವರೇ, ಯಾವುದೇ ನಕ್ಸಲೀಯರನ್ನು ಹತ್ಯೆ ಮಾಡಿದಾಗ ಯಾರೂ ಸಂತೋಷಪಡುವುದಿಲ್ಲ. ನಿಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಮತ್ತು ಮುಖ್ಯವಾಹಿನಿಗೆ ಸೇರಿಕೊಳ್ಳಿ. ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ನಿಮ್ಮ ಬುಡಕಟ್ಟು ಸಹೋದರ ಸಹೋದರಿಯರ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಶರಣಾದವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣ ರಕ್ಷಣೆ ನೀಡಲಿದೆ. ಈ ಪ್ರದೇಶಕ್ಕೆ ಅಭಿವೃದ್ಧಿ ಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಬಸ್ತಾರ್‌ಗೆ ಐದು ವರ್ಷಗಳಲ್ಲಿ ಎಲ್ಲವನ್ನೂ ನೀಡಲು ಬಯಸುತ್ತಾರೆ. ಬಸ್ತಾರ್ 50 ವರ್ಷಗಳಲ್ಲಿ ಅಭಿವೃದ್ಧಿ ಕಂಡಿಲ್ಲ. ಮಕ್ಕಳು ಶಾಲೆಗೆ ಹೋದಾಗ ಮಾತ್ರ ಅಭಿವೃದ್ಧಿ ಸಂಭವಿಸುತ್ತದೆ. ತಹಸಿಲ್‌ಗಳಲ್ಲಿ ಆರೋಗ್ಯ ಸೌಲಭ್ಯಗಳಿವೆ. ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಆರೋಗ್ಯ ವಿಮೆ ಇದೆ. ಬಸ್ತಾರ್‌ನ ಜನರು ತಮ್ಮ ಮನೆ ಮತ್ತು ಗ್ರಾಮಗಳನ್ನು ನಕ್ಸಲೀಯರಿಂದ ಮುಕ್ತಗೊಳಿಸಲು ನಿರ್ಧರಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಮಿತ್‌ ಶಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News