ಆಧಾರ್-ಪಾನ್‌ ನಕಲಿ ಕಾರ್ಡ್‌ ನಿರ್ಮಿಸಿಕೊಡುತ್ತಿರುವ ChatGPT; ಎಐ ಗೆ ದತ್ತಾಂಶಗಳ ಲಭ್ಯತೆ ಬಗ್ಗೆ ಪ್ರಶ್ನಿಸಿದ ಜನರು

Update: 2025-04-05 17:32 IST
ಆಧಾರ್-ಪಾನ್‌ ನಕಲಿ ಕಾರ್ಡ್‌ ನಿರ್ಮಿಸಿಕೊಡುತ್ತಿರುವ ChatGPT; ಎಐ ಗೆ ದತ್ತಾಂಶಗಳ ಲಭ್ಯತೆ ಬಗ್ಗೆ ಪ್ರಶ್ನಿಸಿದ ಜನರು

PC : AADHAAR - Presentation Gov , ChatGPT

  • whatsapp icon

ಹೊಸದಿಲ್ಲಿ: ಕಲೆಯ ರಚನೆಯಲ್ಲಿ ಎಐ (ಕೃತಕ ಬುದ್ಧಿಮತ್ತೆ) ಬಳಕೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಪರ-ವಿರೋಧದ ಚರ್ಚೆಯಾಗುತ್ತಿದೆ. ಅದರಲ್ಲೂ, ಕೆಲವು ಟೆಕ್‌ ದೈತ್ಯ ಕಂಪೆನಿಗಳ ಎಐ ಚಾಟ್‌ ಬೋಟ್‌ ಗಳು ಕಲಾವಿದರ, ಸಾರ್ವಜನಿಕರ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುತ್ತಿದೆ, ಹಾಗೂ ಅನಧಿಕೃತ ಪ್ರವೇಶದ ಮೂಲಕ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ನಡುವೆಯೇ ಓಪನ್‌ ಎಐ (OpenAi) ಚಾಟ್ ಬೋಟ್‌ ಭಾರತೀಯ ಗುರುತಿನ ಚೀಟಿಯನ್ನು ತಯಾರಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದೆ.

ಇತ್ತೀಚೆಗೆ ಸ್ಟುಡಿಯೋ ಜಿಬ್ಲಿ ಶೈಲಿಯ ಚಿತ್ರಗಳನ್ನು ರಚಿಸುವ ಮೂಲಕ ಸುದ್ದಿಯಲ್ಲಿದ್ದ ಚಾಟ್‌ ಬೋಟ್‌, ಇದೀಗ ಆಧಾರ್ ಮತ್ತು ಪಾನ್ ಕಾರ್ಡ್ ಚಿತ್ರಗಳನ್ನು ಸರಾಗವಾಗಿ ರಚಿಸಿ ಬಳಕೆದಾರರಿಗೆ ನೀಡುತ್ತಿದೆ.

ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಸೇರಿದಂತೆ ಭಾರತದ ಗುರುತಿನ ಚೀಟಿಗಳನ್ನು ರಚಿಸಲು ತರಬೇತಿಗಾಗಿ ಓಪನ್‌ಎಐ ಎಲ್ಲಿಂದ ಆಧಾರ್ ಫೋಟೋಗಳ ಡೇಟಾವನ್ನು ಪಡೆದುಕೊಂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ತೀವ್ರವಾಗುತ್ತಿದ್ದಂತೆ ಎಚ್ಚೆತ್ತಿರುವ ಓಪನ್‌ಎಐ, ಅಧಿಕೃತ ದಾಖಲೆಗಳನ್ನು ರಚಿಸಲು ತಾನು ಸಹಾಯ ಮಾಡುವುದಿಲ್ಲ ಎಂದು ಹೇಳಿದೆ. "ನಾನು ಆಧಾರ್ ಕಾರ್ಡ್‌ಗಳಂತಹ ಅಧಿಕೃತ ಸರ್ಕಾರಿ ದಾಖಲೆಗಳನ್ನು ರಚಿಸಲು ಅಥವಾ ರಚಿಸಲು ಸಹಾಯ ಮಾಡಲು ಸಾಧ್ಯವಿಲ್ಲ. ನಿಮಗೆ ಆಧಾರ್ ಕಾರ್ಡ್ ಅಗತ್ಯವಿದ್ದರೆ, ನೀವು ಅಧಿಕೃತ UIDAI ವೆಬ್‌ಸೈಟ್ ಅಥವಾ ನಿಮ್ಮ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬೇಕು." ಎಂದು ಉತ್ತರಿಸಿದೆ.

ಅದಾಗ್ಯೂ, ಅಣಕು, ಮನೋರಂಜನೆ ಅಥವಾ ತಮಾಷೆಗಾಗಿ, ಮಾದರಿ ಐಡಿ ಕಾರ್ಡ್‌ಗಳನ್ನು ನಿರ್ಮಿಸಿಕೊಡುವುದಾಗಿ ಓಪನ್‌ಎಐ ಹೇಳಿದೆ.

ಅಧಿಕೃತ ಗುರುತಿನ ಚೀಟಿಯನ್ನು ರಚಿಸದಿದ್ದರೂ, ಅದೇ ಮಾದರಿಯ ದಾಖಲೆಗಳನ್ನು ನಿರ್ಮಿಸಲು ಬೇಕಾದ ತರಬೇತಿಯನ್ನು ಪಡೆಯಲು ಎಐಗಳಿಗೆ ದತ್ತಾಂಶಗಳು ಎಲ್ಲಿಂದ ಲಭ್ಯವಾಗಿದೆ ಎಂದು ಹಲವರು ಪ್ರಶ್ನಿಸಿದ್ದು, ಇದು ಕಳವಳಕಾರಿ ಎಂದು ಅಭಿಪ್ರಾಯಿಸಿದ್ದಾರೆ.

ಇನ್ನು ಕೆಲವರು ಇದನ್ನು ಗಂಭೀರ ಅಪಾಯವಲ್ಲ ಎಂದು ಹೇಳಿದ್ದು, ಗುರುತಿನ ಚೀಟಿಯ ನಕಲನ್ನು ಈ ಹಿಂದೆಯೂ ನಿರ್ಮಿಸಬಹುದಿತ್ತು. ಎಡಿಟಿಂಗ್‌ ಗೊತ್ತಿರುವ ಯಾರಾದರೂ ಇದನ್ನು ತಯಾರಿಸಬಹುದಿತ್ತು ಎಂದು ವಾದಿಸಿದ್ದಾರೆ.

"ನಕಲಿ ಆಧಾರ್ ಕಾರ್ಡ್ / ಪಾನ್ ಕಾರ್ಡ್ ಹೇಗೆ ಭದ್ರತಾ ಅಪಾಯ? AI ಇಲ್ಲದೆಯೂ ಸಹ ಒಬ್ಬರು ಇವುಗಳ ನಕಲಿಗಳನ್ನು ಸುಲಭವಾಗಿ ಮಾಡಬಹುದು. ಕಾರ್ಡ್ ಅಲ್ಲ, ಕಾರ್ಡ್ ನಲ್ಲಿರುವ ಸಂಖ್ಯೆ ಮುಖ್ಯ. ಈ ಸಂಖ್ಯೆಯನ್ನು ನಕಲಿ ಮಾಡಲು ಸಾಧ್ಯವಿಲ್ಲ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News